ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಾನೂನು ಸಮರಕ್ಕೆ ಜಯ – ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿದ ಮಾಜಿ ಶಾಸಕ ಸುರೇಶ್‌ ಗೌಡ!

ಬೆಂಗಳೂರು : ಸಚಿವ ಎನ್. ಚಲುವರಾಯಸ್ವಾಮಿ ಅವರ ವರ್ಚಸ್ಸು ಮತ್ತು ಘನತೆಗೆ ಧಕ್ಕೆ ತರುವ ದುರುದ್ದೇಶದಿಂದ ನಾಗಮಂಗಲ ಮಾಜಿ ಶಾಸಕ ಸುರೇಶ್‌ ಗೌಡ ಸಾರ್ವಜನಿಕವಾಗಿ ಆಧಾರರಹಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಈ ಸಂಬಂಧ ಮಾಜಿ ಶಾಸಕ ಸುರೇಶ್‌ ಗೌಡ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವ ಚಲುವರಾಯಸ್ವಾಮಿ ಅವರಿಗೆ ಭರ್ಜರಿ ಜಯ ಲಭಿಸಿದೆ.

ಚುನಾವಣೆಯಲ್ಲಿನ ಸೋಲಿನ ಹತಾಶೆಯಿಂದ, ಸಚಿವರ ಬಗ್ಗೆ ಮನಬಂದಂತೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದ ಸುರೇಶ್‌ ಗೌಡ, ಇದೀಗ ನ್ಯಾಯಾಲಯದ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡು ಸಚಿವರ ಕ್ಷಮೆಯಾಚಿಸಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಚಿವ ಚಲುವರಾಯಸ್ವಾಮಿಯವರು ಸಲ್ಲಿಸಲಾಗಿದ್ದ ದೂರಿನ ಅನ್ವಯ, ಸುರೇಶ್‌ ಗೌಡ ಅವರು ಚಲುವರಾಯಸ್ವಾಮಿ ಅವರ ಘನತೆ, ಗೌರವ ಮತ್ತು ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು.

ಇಂದು ನ್ಯಾಯಾಲಯಕ್ಕೆ ಹಾಜರಾದ ಮಾಜಿ ಶಾಸಕ ಸುರೇಶ್ ಗೌಡ ಸಲ್ಲಿಸಲಾದ ಜಂಟಿ ಮೆಮೊದಲ್ಲಿ, ಸುರೇಶ್‌ ಗೌಡ ಅವರು ತಾವು ಮಾಡಿದ ಯಾವುದೇ ಹೇಳಿಕೆಗಳಿಂದ ಸಚಿವ ಚಲುವರಾಯಸ್ವಾಮಿ ಅವರಿಗೆ ನೋವಾಗಿದ್ದರೆ ಅಥವಾ ಅವರ ಘನತೆಗೆ ಧಕ್ಕೆಯಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ “ನನ್ನ ಯಾವುದೇ ಹೇಳಿಕೆಯಿಂದ ದೂರುದಾರರಿಗೆ(ಚಲುವರಾಯಸ್ವಾಮಿಯವರಿಗೆ) ನೋವಾಗಿದ್ದರೆ, ಯಾವುದೇ ದುರುದ್ದೇಶವಿಲ್ಲದೆ ಈ ಹೇಳಿಕೆಯನ್ನು ನೀಡಲಾಗಿದೆ, ಮತ್ತು ದೂರುದಾರರಿಗೆ ಅಥವಾ ದೂರುದಾರರ ಘನತೆಗೆ ಧಕ್ಕೆ ತರುವ ಅಥವಾ ದೂರುದಾರರನ್ನು ಮಾನಹಾನಿ ಮಾಡುವ ಯಾವುದೇ ಉದ್ದೇಶವಿರಲಿಲ್ಲ. ಆರೋಪಿಯು ನೀಡಿದ ಯಾವುದೇ ಹೇಳಿಕೆ ದೂರುದಾರರಿಗೆ ನೋವುಂಟು ಮಾಡಿದ್ದರೆ, ಆರೋಪಿಯು ದೂರುದಾರರಲ್ಲಿ ವಿಷಾದ ವ್ಯಕ್ತಪಡಿಸುತ್ತಾನೆ” ಎಂದು ಮೆಮೊದಲ್ಲಿ ತಿಳಿಸಲಾಗಿದೆ.

ಈ ತೀರ್ಪು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ವಿರುದ್ಧ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಸಚಿವರ ಪರ ವಕೀಲರಾದ ಎಸ್.ಎ. ಅಹಮದ್, ಸೂರ್ಯ ಮುಕುಂದರಾಜ್ ವಕಾಲತ್ತು ವಹಿಸಿದ್ದರು.

ಇದನ್ನೂ ಓದಿ : ಅತ್ಯಾಚಾರ ಪ್ರಕರಣ : ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಜು.2ಕ್ಕೆ ಮುಂದೂಡಿಕೆ!

Btv Kannada
Author: Btv Kannada

Read More