ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವುಗಳ ಕುರಿತ ಪತ್ರ ವೈರಲ್ – ಎಸ್ಪಿ ಭೇಟಿಗೆ ಬಂದ ವಕೀಲರ ನಿಯೋಗ!

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿನ ಅಸಹಜ ಸಾವುಗಳ ಮಾಹಿತಿ ಇರುವ ವ್ಯಕ್ತಿ ಪೊಲೀಸ್ ಶರಣಾಗತಿ ಆಗುತ್ತೇನೆ ಎಂದು ವಕೀಲರ ಮೂಲಕ ಬರೆದ ಪತ್ರ ವೈರಲ್ ಆಗಿತ್ತು. ಇದೀಗ ಪತ್ರ ವೈರಲ್ ಆದ ಬೆನ್ನಲ್ಲೇ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್‌ ಎಸ್‌. ದೇಶಪಾಂಡೆ ನಿಯೋಗ ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಅರುಣ್ ಅವರನ್ನು ಭೇಟಿಯಾಗಲು ಆಗಮಿಸಿತ್ತು. ಆದರೆ ಎಸ್ಪಿ ಅನುಪಸ್ಥಿತಿ ಹಿನ್ನಲೆ ವಕೀಲರ ನಿಯೋಗ ವಾಪಸ್ ಆಗಿದೆ. ವೈರಲ್ ಪತ್ರದಲ್ಲಿ ಬೆಂಗಳೂರಿನ ವಕೀಲರ ನಿಯೋಗ ಎಂದು ಉಲ್ಲೇಖಿಸಲಾಗಿದೆ.

ಪ್ರಕರಣ ಹಿನ್ನಲೆ :

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಕೊಲೆಗಳು ಮತ್ತು ಅತ್ಯಾಚಾರಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಗೆ ಬಂದು ಶರಣಾಗುತ್ತೇನೆಂದು ವ್ಯಕ್ತಿಯೊಬ್ಬ ಬರೆದಿರುವ ಪತ್ರ ವೈರಲ್ ಆಗಿತ್ತು. ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಎಂಬವರ ಹೆಸರಿನಲ್ಲಿರುವ ಈ ಪತ್ರದಲ್ಲಿ, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಹತ್ಯೆ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ, ಮೃತದೇಹಗಳನ್ನು ಹೂತು ಹಾಕಿದ್ದ ವ್ಯಕ್ತಿಯೊಬ್ಬ ತನ್ನ ಪಾಪಪ್ರಜ್ಞೆಯನ್ನು ಪರಿಹರಿಸಿಕೊಳ್ಳಲು ಧರ್ಮಸ್ಥಳ ಪೊಲೀಸ್ ಠಾಣೆಗೆ ಕೂಡಲೇ ಹಾಜರಾಗಿ ಶರಣಾಗುವ ನಿರ್ಧಾರ ಮಾಡಿರುತ್ತಾನೆ. ಮತ್ತು ತಾನು ಹೂತು ಹಾಕಿರುವ ಮೃತದೇಹಗಳನ್ನು ಪೋಲೀಸರ ಸಮ್ಮುಖದಲ್ಲಿ ಹೊರತೆಗೆಯುವ ನಿರ್ಧಾರ ಮಾಡಿರುತ್ತಾನೆ. ಇತ್ತೀಚೆಗೆ ಹೊರತೆಗೆದ ಕಳೇಬರವೊಂದುನ್ನು ಪೋಲೀಸರಿಗೆ ಒಪ್ಪಿಸುವುದಾಗಿ ಹೇಳಿದ್ದಾನೆ. ಪತ್ರ ವೈರಲ್ ಆದ ಬೆನ್ನಲ್ಲೇ ಧರ್ಮಸ್ಥಳ ಪೊಲೀಸರು ವಕೀಲರನ್ನು ಸಂಪರ್ಕ ಮಾಡಿದ್ದಾರೆ.

ಈ ಬಗ್ಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾ‌ರ್ ಮಾತನಾಡಿ, ಧರ್ಮಸ್ಥಳ ಪೊಲೀಸರು ಈ ಪತ್ರದ ನೈಜತೆಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಉಲ್ಲೇಖಿಸಿದ್ದ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್‌. ದೇಶಪಾಂಡೆ ಎಂಬವರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ವ್ಯಕ್ತಿಯೋರ್ವ ತಮ್ಮ ಬಳಿ ಬಂದು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ತನಗೆ ಮಾಹಿತಿಯಿರುವುದಾಗಿಯೂ, ತಾನು ಧರ್ಮಸ್ಥಳ ಪೊಲೀಸ್‌ ಠಾಣೆಗೆ ಶರಣಾಗಿ ಮಾಹಿತಿ ನೀಡಲು ಸಿದ್ಧನಿರುವುದಾಗಿ ತಿಳಿಸಿದ್ದಾನೆ ಎಂದು ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಆ ವ್ಯಕ್ತಿಗೆ ಅಗತ್ಯ ಕಾನೂನು ಸುರಕ್ಷತೆಯನ್ನು ಕಲ್ಪಿಸಿದ ಬಳಿಕ ಹಾಜರುಪಡಿಸುವುದಾಗಿ ವಕೀಲರು ಹೇಳಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಸಂಬಂಧಪಟ್ಟ ಆ ವ್ಯಕ್ತಿ ಠಾಣೆಗೆ ಹಾಜರಾಗಿ ಮಾಹಿತಿ ನೀಡಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್ ಸ್ಪಷ್ಟನೆ ನೀಡಿದ್ದರು.

ಸದ್ಯ ಆ ವ್ಯಕ್ತಿ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರವನ್ನು ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ದ.ಕ ಎಸ್ಪಿ ಜೊತೆ ಚರ್ಚೆ ನಡೆಸಲು ವಕೀಲರ ನಿಯೋಗ ಮಂಗಳೂರಿಗೆ ಆಗಮಿಸಿತ್ತು.

ಇದನ್ನೂ ಓದಿ : ಓಂಪ್ರಕಾಶ್ ರಾವ್ ನಿರ್ದೇಶನದ “ಫೀನಿಕ್ಸ್” ಸಿನಿಮಾ ಶೂಟಿಂಗ್ ಕಂಪ್ಲೀಟ್!

Btv Kannada
Author: Btv Kannada

Read More