ಚಾಮರಾಜನಗರ : ಐದು ಹುಲಿಗಳ ಅನುಮಾನಸ್ಪದ ಸಾವು ಪ್ರಕರಣ ತನಿಖೆ ಚುರುಕುಗೊಂಡಿದೆ. ಮಲೆಮಹದೇಶ್ವರ ವನ್ಯಧಾಮದ ಹೂಗ್ಯಂ ಅರಣ್ಯ ವಲಯದ ಮೀಣ್ಯಂ ಬಳಿ ಈ ಘಟನೆ ಸಂಭವಿಸಿತ್ತು. ಈಗಾಗಲೇ ಸಾವನ್ನಪ್ಪಿದ ಹುಲಿಗಳಲ್ಲಿ ಮೊದಲು ತಾಯಿ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಇಂದು ಉಳಿದ ನಾಲ್ಕು ಮರಿ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಅರಣ್ಯ ಇಲಾಖೆಯ ಮುಖ ಪಶು ವೈದ್ಯಾಧಿಕಾರಿ ಡಾ. ವಾಸಿಂಮಿರ್ಜಾ ಮತ್ತು ಡಾ. ಶಿವರಾಜ್ ಅವರರಿಂದ ಮರಣೋತ್ತರ ಪರೀಕ್ಷೆ ನಡೆಯಲಿದೆ. NTCA ಮಾರ್ಗಸೂಚಿಗಳ ಪ್ರಕಾರ ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ. ಇಂದು ಘಟನಾ ಸ್ಥಳಕ್ಕೆ ಉನ್ನತಮಟ್ಟದ ತನಿಖಾ ತಂಡ ಆಗಮಿಸಿದೆ. ಪಿಸಿಸಿಎಫ್ BP ರವಿ, ಎಪಿಸಿಸಿಎಫ್ ಶ್ರೀನಿವಾಸಲು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್, NTCA ಪ್ರತಿನಿಧಿ ಮಲ್ಲೇಶಪ್ಪ, ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಮತ್ತು ಮೈಸೂರು ಮೃಗಾಲಯದ ಪಶುವೈದ್ಯಾಧಿಕಾರಿ ಸೇರಿದಂತೆ ಉನ್ನತ ಮಟ್ಟದ ತಂಡ ಈ ಪ್ರಕರಣದ ತನಿಖೆ ನಡೆಸಲಿದೆ.
ಈಗಾಗಲೇ ತನಿಖಾ ತಂಡ ಕೂಲಂಕಷವಾಗಿ ಸ್ಥಳ ಪರಿಶೀಲನೆ ಮಾಡಿದ್ದು, ಪಶುವೈದ್ಯರಿಂದ ನಾಲ್ಕು ಮರಿ ಹುಲಿಗಳ ಮರಣೋತ್ತರ ಪರೀಕ್ಷೆ ಆರಂಭವಾಗಿದೆ. ಮೃತ ಹುಲಿಗಳ ಅಂಗಾಂಶಗಳ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸ್ಯಾಂಪಲ್ಸ್ ಕಳಿಹಿಸುವ ಸಾಧ್ಯತೆಯಿದೆ.
ಇನ್ನು ಹುಲಿಗಳ ಮೃತ ದೇಹದ ಪ್ರಮುಖ ಅಂಗಾಂಗಗಳನ್ನ ಸಂಗ್ರಹಣೆ ಮಾಡಿದ್ದು, ಮೂರು ಗುಂಪುಗಳಲ್ಲಿ ಮಾದರಿ ಸಂಗ್ರಹಿಸಿ ಪ್ರತ್ಯೇಕವಾಗಿ ಮೂರು ಲ್ಯಾಬ್ಗಳಿಗೆ ಸ್ಯಾಂಪಲ್ ಗಳ ರವಾನಿಸಲಾಗಿದೆ. ಎಪಿಸಿಸಿಎಫ್ ಶ್ರೀನಿವಾಸಲು, ಸಿಸಿಎಫ್ ಹೀರಾ ಲಾಲ್, ವನ್ಯ ಜೀವಿ ತಜ್ಞ ಸಂಜಯಗುಬ್ಬಿ, ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ವಿಷವಿಕ್ಕಿ ಕೊಂದಿರುವ ಶಂಕೆ : ಐದು ಹುಲಿಗಳ ಸಾವು ಪ್ರಕರಣದಲ್ಲಿ, ಮೇಲ್ನೋಟಕ್ಕೆ ವಿಷವಿಕ್ಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಹುಲಿಗಳ ಶವದ ಅನತಿ ದೂರದಲ್ಲೇ ಬಿದ್ದಿರುವ ಹಸುವೊಂದರ ಶವವನ್ನು ಕಂಡು, ಹಸುವಿನ ಮಾಂಸಕ್ಕೆ ಕೀಟನಾಶಕ ಫೋರೆಟ್ ಹರಳು ಹಾಕಿರುವ ಬಗ್ಗೆ ಮಾಹಿತಿ ದೊರೆತಿದೆ. ಸ್ಥಳೀಯರು ಹುಲಿಗಳನ್ನು ಕೊಲ್ಲಲು ಹಸುವಿಗೆ ವಿಷ ಹಾಕಿದ್ದಾರಾ ಅಥವಾ ಬೇಟೆಗಾರರು ಹುಲಿ ಬೇಟೆಯಾಡಲು ಈ ಕ್ರಮ ಕೈಗೊಂಡಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಕಾಡಿನಲ್ಲಿ ಹಸುಗಳನ್ನು ಬಿಡುವ ಸ್ಥಳೀಯರ ಕ್ರಮದ ಬಗ್ಗೆ ಸಮರ್ಪಕ ವಿಚಾರಣೆ ಅಗತ್ಯವಾಗಿದೆ. ಸದ್ಯ ನಾಲ್ವರನ್ನ ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಇಬ್ಬರನ್ನ ಪ್ರತ್ಯೇಕವಾಗಿ ಇಟ್ಟು ವಿಚಾರಣೆ ಮಾಡಿತ್ತಿದ್ದಾರೆ.
14 ದಿನಗಳ ಒಳಗೆ ಸಂಪೂರ್ಣ ವರದಿ : ಹುಲಿಗಳನ್ನು ವಿಷವಿಕ್ಕಿ ಕೊಲ್ಲಲಾಗಿದೆಯಾ? ಗುಂಡು ಹೊಡೆದು ಹತ್ಯೆ ಮಾಡಲಾಗಿದೆಯಾ ಅಥವಾ ಬೇರೆ ಇನ್ಯಾವ ರೀತಿಯಲ್ಲಿ ಹುಲಿಗಳ ಸಾವಾಗಿದೆ ಎಂಬುದರ ತನಿಖೆ ನಡೆಯಲಿದೆ. ಬೇಟೆಗಾರರ ಅಥವಾ ದನಗಾಹಿಗಳು ವಿಷವಿಟ್ಟಿದ್ದಾರೆ ಎಂಬುದರ ಕುರಿತು ತನಿಖೆ ನಡೆಯಲಿದೆ. 14 ದಿನಗಳ ಒಳಗೆ ಸಂಪೂರ್ಣ ವರದಿ ಸಲ್ಲಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ.
ದನಗಾಹಿಗಳನ್ನು ಕರೆತಂದು ವಿಚಾರಣೆ ನಡೆಸುತ್ತಿರುವ ಅರಣ್ಯಾಧಿಕಾರಿಗಳು, ಸತ್ತ ಹಸು ಯಾರದ್ದು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಸತ್ತ ಹಸು ತಮ್ಮದಲ್ಲ ಎಂದು ಸ್ಥಳೀಯರು ಹೇಳ್ತಿದ್ದಾರೆ. ಸತ್ತ ಹಸು ಯಾರು ತಂದಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಬೇರೆಡೆಯಿಂದ ತಂದು ಇಲ್ಲಿ ಹಾಕಿದ್ದಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಸುಗಳನ್ನು ಕಾಡಿನಲ್ಲಿ ಬಿಟ್ಟು ಕೆಲವರು ಮೇಯಿಸುತ್ತಿದ್ದರಂತೆ. ಹಸುಗಳನ್ನು ಕಾಡಿನಲ್ಲಿ ಮೇಯಿಸಲು ಅನುಮತಿ ಕೊಟ್ಟವರು ಯಾರು ಎಂಬ ಪ್ರಶ್ನೆ ಮೂಡಿದೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದ ಕುರಿತು ತನಿಖೆ ನಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ನೊಣವಿನಕೆರೆ ಶ್ರೀಗಳ ಹೆಸರಲ್ಲಿ ಹಣ ವಸೂಲಿ – ಮೋಸದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸ್ವಾಮೀಜಿ ಮನವಿ!
