ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಾರ್ಮಿಕರಿಗೆ ಉಪಯೋಗಕ್ಕೆ ಬಾರದ ಯೋಜನೆಗಳಿಗೆ 800 ಕೋಟಿ ವೆಚ್ಚ ಮಾಡಿದೆ. ಈ ಯೋಜನೆಗಳ ಕುರಿತು ಸಂಪೂರ್ಣ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಹೋರಾಟ ಸಮನ್ವಯ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವ ಅಧ್ಯಕ್ಷ ರಮೇಶ್, ರಾಜ್ಯ ಘಟಕದ ಅಧ್ಯಕ್ಷ ಟಿ. ಮರಿಗೌಡ, ‘ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 310 ಕೋಟಿ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮತ್ತು ತರಬೇತಿ ಕಾರ್ಯಕ್ರಮ ನಡೆಸಲಾಗಿದೆ. ಈ ಆರೋಗ್ಯ ತಪಾಸಣೆಯಲ್ಲಿ 20ಕ್ಕೂ ಹೆಚ್ಚು ರೀತಿಯ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಬೇಕಾಗಿತ್ತು. ಆದರೆ, ಕೇವಲ ಎರಡು ಮೂರು ರೀತಿಯ ಪರೀಕ್ಷೆ ಮಾಡಿ ಎಲ್ಲಾ ಕಾರ್ಮಿಕರಿಗೆ ಒಂದೇ ರೀತಿಯ ವರದಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
2024-25ನೇ ಸಾಲಿನಲ್ಲಿ ರಾಜ್ಯದಾದ್ಯಂತ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೌಶಲ ತರಬೇತಿ, ಉಪಕರಣಗಳ ಸುರಕ್ಷಿತ ಬಳಕೆ (ಆರ್‌ಪಿಎಲ್) ತರಬೇತಿ ಹೆಸರಿನಲ್ಲಿ 254.30 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ. ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿಕೊಳ್ಳಲಾಗಿದೆ. ಆರ್‌ಪಿಎಲ್ ಕಿಟ್ ಹೆಸರಿನಲ್ಲಿ 17.99 ಕೋಟಿ ವಿನಿಯೋಗಿಸಲಾಗಿದೆ. ಒಂದು ಕಿಟ್‌ಗೆ 2,499 ಬೆಲೆ ನಿಗದಿಪಡಿಸಲಾಗಿದೆ. ಈ ಕಿಟ್ ಹೆಲೈಟ್, ಕೈಗವಸುಗಳು, ಕನ್ನಡಕ, ಬ್ಯಾಗ್‌ಗಳನ್ನು ಒಳಗೊಂಡಿರುತ್ತದೆ. ಆರ್‌ಪಿಎಲ್ ಟೆಂಡರ್ ಪಡೆದ ಕಂಪನಿಗೆ ಶೇಕಡ 60ರಷ್ಟು ಹೆಚ್ಚು ಹಣ ಪಾವತಿಸಲಾಗಿದೆ. ನೋಂದಾಯಿತ ಕಟ್ಟಡ ಕಾರ್ಮಿಕರ ಸೆಸ್ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
2023ರಿಂದ 2025ನೇ ಸಾಲಿನಲ್ಲಿ ರಾಜ್ಯದಾದ್ಯಂತ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಅಧಿಕಾರಿಗಳು ಮಂಜೂರಾತಿ ನೀಡಿದ ಅರ್ಜಿಗಳನ್ನು ಮರುಪರಿಶೀಲನೆ ಮಾಡಲು ಖಾಸಗಿ ಕಂಪನಿಗೆ ಮರುಟೆಂಡರ್ ನೀಡಿದ್ದು, ಇದರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಮಂಡಳಿ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಕುಟುಂಬ ಐಡಿ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆಷಾಢ ಮಾಸದ ಮೊದಲ ಶುಕ್ರವಾರ – ನಾಡ ಅಧಿದೇವತೆಗೆ ವಿಶೇಷ ಅಲಂಕಾರ.. ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ!
