ಆಷಾಢ ಮಾಸದ ಮೊದಲ ಶುಕ್ರವಾರ – ನಾಡ ಅಧಿದೇವತೆಗೆ ವಿಶೇಷ ಅಲಂಕಾರ.. ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ!

ಮೈಸೂರು : ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಮುಂಜಾನೆಯಿಂದಲೇ ಚಾಮುಂಡಿ ಬೆಟ್ಟದಲ್ಲಿ ಜನಸಾಗರ ನೆರೆದಿದ್ದು, ರಾಜ್ಯದ ವಿವಿಧ ಭಾಗಗಳಿಂದ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂದಿದೆ. ಆಷಾಢದ ಮೊದಲ ಶುಕ್ರವಾರ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ನಾನಾ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಸಾವಿರಾರು ಭಕ್ತರು ನಾಡದೇವಿಯನ್ನು ಕಣ್ತುಂಬಿಕೊಂಡಿದ್ದಾರೆ.

ಬೆಳಗಿನ ಜಾವ 3 ಗಂಟೆಯಿಂದಲೇ ಬೆಟ್ಟಕ್ಕೆ ಭಕ್ತರು ಆಗಮಿಸಿದ್ದು, ಇಷ್ಟಾರ್ಥಗಳ ಈಡೇರಿಕೆಗಾಗಿ ತಾಯಿ ದರ್ಶನ ಪಡೆಯುತ್ತಿದ್ದಾರೆ. ಇನ್ನು ತಾಯಿ ಚಾಮುಂಡೇಶ್ವರಿಗೆ ನಾಲ್ಕು ವಾರಗಳ ಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ದೇವಿಯ ಉತ್ಸವ ಮೂರ್ತಿಗೆ ವಿವಿಧ ಬಗೆಯಲ್ಲಿ ಅಲಂಕಾರ ಮಾಡಲಾಗುತ್ತೆ. ಇತ್ತ ದೇಗುಲಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕಲ್ಪಿಸಿದೆ. ಭಕ್ತರು ಕೂಡ ಸರದಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಿದ್ದಾರೆ.

ಖಾಸಗಿ ವಾಹನಕ್ಕೆ ಬೆಟ್ಟಕಿಲ್ಲ ಎಂಟ್ರಿ : ಪ್ರಮುಖವಾಗಿ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಶುಕ್ರವಾರ, ಶನಿವಾರ, ಭಾನುವಾರ ಖಾಸಗಿ ವಾಹನಗಳಿಗೆ ಎಂಟ್ರಿ ಇರುವುದಿಲ್ಲ. ಶುಕ್ರವಾರದಂದು ಬೆಟ್ಟಕ್ಕೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಮಾಡಬೇಕಿದೆ. ಲಲಿತ ಮಹಲ್ ಆವರಣದಿಂದ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಶನಿವಾರ, ಭಾನುವಾರ ಎಂದಿನಂತೆ ಬಸ್ ಶುಲ್ಕ ಅನ್ವಯವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಇನ್ನು, ಜಿಲ್ಲಾಡಳಿತ ಧರ್ಮ ದರ್ಶನದ ಜೊತೆಗೆ 300 ರೂಪಾಯಿ ಹಾಗೂ 2000ರೂ ಟಿಕೆಟ್ ನಿಗದಿಪಡಿಸಿದೆ. ಜೊತೆಗೆ ಲಲಿತ್ ಮಹಲ್ ಆವರಣದಲ್ಲೇ ಟಿಕೆಟ್ ಪಡೆಯಲು ವ್ಯವಸ್ಥೆ ಮಾಡಲಾಗಿದೆ. 2000ರೂ ದರ್ಶನ ಟಿಕೆಟ್ ಪಡೆದವರಿಗೆ ಎಸಿ ಬಸ್​ನಲ್ಲಿ ಉಚಿತ ಪ್ರಯಾಣ ನೇರ ದರ್ಶನವಿರಲಿದೆ. ಆಷಾಢ ಶುಕ್ರವಾರದಲ್ಲಿ ವಿವಿಐಪಿಗಳಿಗೆ ಬೆಳಿಗ್ಗೆ 5 ರಿಂದ 10ಗಂಟೆವರೆಗೆ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ.

ಇದನ್ನೂ ಓದಿ : ಫ್ರೆಂಚ್​​ ಮಹಿಳೆಯಲ್ಲಿ ವಿಶ್ವದ ಅಪರೂಪದ ಬ್ಲಡ್​ ಗ್ರೂಪ್ ಪತ್ತೆ – ‘ಗ್ವಾಡಾ ನೆಗೆಟಿವ್’ ಎಂದರೇನು?

 

Btv Kannada
Author: Btv Kannada

Read More