ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ, ಈ 14 ದಿನ ಅದ್ಭುತವಾಗಿರಲಿದೆ – ISSನಿಂದ ಶುಭಾಂಶು ಶುಕ್ಲಾ ಮೊದಲ ಸಂದೇಶ!

ಹೊಸದಿಲ್ಲಿ : ಅಕ್ಸಿಯಂ-4 ಮಿಷನ್‌ ಅಡಿ ಬಾಹ್ಯಾಕಾಶ ಯಾತ್ರೆ ಕೈಗೊಂಡಿರುವ ಭಾರತದ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳು ಗುರುವಾರ ಯಶಸ್ವಿಯಾಗಿ ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ್ದಾರೆ.

ಶುಕ್ಲಾಅವರೊಂದಿಗೆ ಅಮೆರಿಕದ ಪೆಗ್ಗಿ ವಿಟ್ಸನ್‌, ಹಂಗೇರಿಯ ಟಿರ್ಬೊ ಕಾಪು, ಪೋಲೆಂಡ್‌ನ ಸ್ಲಾವೋಶ್‌ ಉಜ್ನಾನ್‌ಸ್ಕಿ ವಿಶ್ನಿವುಫ್‌ಸ್ಕಿ ಅವರನ್ನು ಹೊತ್ತು ಸಾಗಿದ್ದ ಫಾಲ್ಕನ್‌ 9 ಗಗನನೌಕೆ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ತಲುಪಿದೆ.

ಇದೀಗ ಬಾಹ್ಯಾಕಾಶಕ್ಕೆ ತಲುಪಿದ ಬಳಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ತಮ್ಮ ಮೊದಲ ಸಂದೇಶ ರವಾನೆ ಮಾಡಿದ್ದಾರೆ. ‘ನಾನು ಈ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೆ. ನಿಮ್ಮ ಪ್ರೀತಿ, ಆಶೀರ್ವಾದದಿಂದ ಐಎಸ್‌ಎಸ್‌ ತಲುಪಿದ್ದೇನೆ. ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ ಅಂತ ಭಾವುಕರಾಗಿದ್ದಾರೆ.

ನಾವು ಹೀಗೆ ನಿಂತಿರೋದು ಸುಲಭ ಅಂತಾ ಕಾಣಿಸಬಹುದು. ಆದರೆ ಇದು ಕಷ್ಟಕರ. ತಲೆ ಭಾರವಾದಂತಿದೆ, ಸ್ವಲ್ಪ ಕಷ್ಟವಾಗುತ್ತಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಹೊಂದಿಕೊಳ್ಳುತ್ತೇವೆ. ಇದು ಮೊದಲ ಹೆಜ್ಜೆ, ಇನ್ನೂ 14 ದಿನ ನಾವಿಲ್ಲಿರುತ್ತೇವೆ. ಅನೇಕ ವಿಜ್ಞಾನದ ಪ್ರಯೋಗಗಳನ್ನು ಮಾಡಲಿದ್ದೇವೆ. ನಿಮ್ಮೊಂದಿಗೆ ಮಾತನಾಡುತ್ತೇವೆ ಎಂದಿದ್ದಾರೆ ಶುಕ್ಲಾ.

ಹಾಗೆಯೇ ಇದು ನಮ್ಮ ಅಂತರಿಕ್ಷ ಯಾನದ ಹೆಜ್ಜೆಯೂ ಹೌದು. ಡ್ರಾಗನ್‌ನಲ್ಲಿದ್ದಾಗ ನಿಮ್ಮ‌ ಜೊತೆ ಮಾತನಾಡಿದ್ದೆ. ಇಲ್ಲಿಂದ ನಂತರವೂ ಮಾತನಾಡುತ್ತೇನೆ. ಈ ಯಾನವನ್ನು ಅತ್ಯಾಕರ್ಷಕ ಮಾಡೋಣ. ನಾವೆಲ್ಲರೂ ಕೂಡ ಉತ್ಸಾಹದಿಂದ ಭಾಗಿಯಾಗುತ್ತೇವೆ. ನಾನು ತುಂಬಾ ಉತ್ಸಾಹದಿಂದಿದ್ದೇನೆ. ನನ್ನ ತೋಳಿನಲ್ಲಿ ತ್ರಿವರ್ಣ ಧ್ವಜದ ಜೊತೆ ನಡೆಯುತ್ತಿದ್ದೇನೆ, ಮುಂದಿನ 14 ದಿನ ಇನ್ನಷ್ಟು ಆಕರ್ಷಕವಾಗಿರಲಿದೆ. ಜೈ ಹಿಂದ್, ಜೈ ಭಾರತ… ಅಂತ ಶುಕ್ಲಾ ಹೇಳಿದ್ದಾರೆ.

ಇದನ್ನೂ ಓದಿ : ನಿಮ್ಮ ತಪ್ಪುಗಳಿಂದ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಆಗುತ್ತಿದೆ – ಹೆಚ್ಚುವರಿ ಅಡ್ವೊಕೇಟ್ ಜನರಲ್​ಗಳಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್!

 

Btv Kannada
Author: Btv Kannada

Read More