ಬೆಂಗಳೂರು : ಅನೈಸರ್ಗಿಕ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಸೂರಜ್ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸಿಐಡಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.
ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಿತ್ತು. ಆರೋಪ ಸಾಬೀತುಪಡಿಸಲು ಬೇಕಾದ ಸಾಕ್ಷ್ಯಗಳು ಲಭ್ಯವಿಲ್ಲದ ಕಾರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿದೆ.
ಏನಿದು ಪ್ರಕರಣ? ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಅವರನ್ನು ಜೂ.23 ರಂದು ಪೊಲೀಸರು ಬಂಧಿಸಿದ್ದರು. ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ಅಕ್ರಮ ಬಂಧನ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್‍ಪಿಗೂ ದೂರಿನ ಪ್ರತಿಯನ್ನು ಇ-ಮೇಲ್ ಮಾಡಿದ್ದ. ಮೇಲ್ ಆಧರಿಸಿ ಸಂತ್ರಸ್ತನನ್ನ ಕರೆಸಿ ಮಾಹಿತಿ ಪಡೆದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.
ಇದಾದ ಬಳಿಕ ಸಂತ್ರಸ್ತನ ವಿರುದ್ಧ ಪ್ರತಿದೂರು ನೀಡಲು ಸೂರಜ್ ಹಾಸನದ ಸೆನ್ ಪೊಲೀಸ್ ಠಾಣೆಗೆ ತೆರಳಿದ್ದರು. ಅಲ್ಲಿಯೇ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಸೂರಜ್ ರೇವಣ್ಣಗೆ ಜನಪ್ರತಿನಿಧಿಗಳ ಕೋರ್ಟ್ ಜುಲೈ 22ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ : ಬೆಂಗಳೂರಲ್ಲಿ ಮನಕಲಕುವ ಘಟನೆ.. ಮಗ ವೃದ್ಧಾಶ್ರಮ ಸೇರಿಸಿದ್ದಕ್ಕೆ ನೊಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!
