ಬೆಂಗಳೂರು : ಕರ್ನಾಟಕದ ಹಲವೆಡೆ ವರುಣನ ಅಬ್ಬರ ಮುಂದುವರಿದಿದ್ದು, ಜನರ ಹೈರಾಣಾಗಿದ್ದಾರೆ. ಕೆಲ ಮೂರ್ನಾಲ್ಕು ದಿನಗಳಿಂದ ತಗ್ಗಿದ್ದ ಮಳೆ ಮತ್ತೆ ಅಬ್ಬರಿಸಲು ಶುರುವಾಗಿದೆ. ಇಂದು(ಜೂನ್ 26) ಸಹ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಐದು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ಇಂದು ರಜೆ ಘೋಷಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಕೇವಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದ್ದರೆ, ಕೆಲವು ಕಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಬೆಳಗಾವಿಯ 3 ತಾಲೂಕಿನಲ್ಲಿ ರಜೆ : ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಸಹ ಜಿಲ್ಲೆಯ ಮೂರು ತಾಲುಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ, ಖಾನಾಪುರ, ಕಿತ್ತೂರು ತಾಲೂಕಿನಲ್ಲಿ ಮಾತ್ರ ಸರ್ಕಾರಿ, ಅನುದಾನ ರಹಿತ, ಅನುದಾನ ಸಹಿತ ಮತ್ತು ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಡಿಸಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ರಜೆ : ಇನ್ನು, ಕೊಡುಗು ಜಿಲ್ಲೆಯಲ್ಲೂ ಸಹ ನಾಳೆಯೂ ಮಳೆ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕೊಡಗು ಜಿಲ್ಲೆಯಾದ್ಯಂತ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಿಯು ಕಾಲೇಜಿಗೆ ರಜೆ ನೀಡಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶಿಸಿದ್ದಾರೆ.
ಹಾಸನ ಜಿಲ್ಲೆಯ ಐದು ತಾಲೂಕಿನಲ್ಲಿ ರಜೆ : ಹಾಸನದಲ್ಲೂ ಕೂಡ ವರುಣನ ಅಬ್ಬರ ಮುಂದುವರಿದಿದ್ದು, ಜಿಲ್ಲೆಯ 3 ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಹಾಸನ, ಸಕಲೇಶಪುರ, ಆಲೂರು, ಹೊಳೆನರಸೀಪುರ, ಅರಕಲಗೂಡು ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ & ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.
ಜೋಯಿಡಾ, ದಾಂಡೇಲಿಯಲ್ಲಿ ರಜೆ : ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಎರಡು ತಾಲೂಕಿನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಜೋಯಿಡಾ, ದಾಂಡೇಲಿ ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ 5 ತಾಲೂಕಿನಲ್ಲಿ ರಜೆ ಘೋಷಣೆ : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಐದು ತಾಲೂಕಿನ ಶಾಲೆಗಳಿ ಮಾತ್ರ ರಜೆ ನೀಡಲಾಗಿದೆ. ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, NR ಪುರ ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ : ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಭಾಗ ಹಾಗೂ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪ್ರೌಢಶಾಲೆಯವರೆಗೆ ಮಾತ್ರ ರಜೆ ಘೋಷಣೆ ಮಾಡಲಾಗಿದ್ದು, ಎಂದಿನಂತೆ ಕಾಲೇಜುಗಳು ಓಪನ್ ಆಗಿರುತ್ತವೆ.
ಇದನ್ನೂ ಓದಿ : ಇನ್ಮುಂದೆ ಎಲ್ಲಾ ಇಲಾಖೆಗಳಲ್ಲಿ ಕನ್ನಡ ಕಡ್ಡಾಯ – ಸೂಚನೆ ಉಲ್ಲಂಘಿಸಿದರೆ ಕಠಿಣ ಕ್ರಮ.. ಸರ್ಕಾರದಿಂದ ಖಡಕ್ ಎಚ್ಚರಿಕೆ!
