ಬೆಂಗಳೂರು : ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳ ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪೂರ್ಣ ಪ್ರಮಾಣದಲ್ಲಿ ಬಳಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಈ ಸೂಚನೆಯನ್ನು ಪಾಲಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ವೈಯಕ್ತಿಕವಾಗಿ ಶಿಸ್ತು ಕ್ರಮ ನಿಶ್ಚಿತ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1963ರಲ್ಲಿ ಕನ್ನಡ ಭಾಷೆ ಕರ್ನಾಟಕದ ಆಡಳಿತ ಭಾಷೆಯಾಗಿ ಇರತಕ್ಕದ್ದು ಎಂದು ತಿಳಿಸಲಾಗಿದೆ. ಹೀಗಾಗಿ ಕನ್ನಡದಲ್ಲಿ ಬರುವ ಅರ್ಜಿ ಮತ್ತು ಪತ್ರಗಳಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಉತ್ತರಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು. ವಿಧಾನ ಮಂಡಲದ ಕಾರ್ಯಕಲಾಪಗಳು, ಪತ್ರ ವ್ಯವಹಾರ, ಗಮನಸೆಳೆಯುವ ಸೂಚನೆ ಇತ್ಯಾದಿಗಳು ಕಡ್ಡಾಯವಾಗಿ ಕನ್ನಡದಲ್ಲೇ ಸಲ್ಲಿಸಲು ಸೂಚಿಸಲಾಗಿದೆ.
ನೇಮಕಾತಿ, ವರ್ಗಾವಣೆ ಮತ್ತು ರಜೆ ಮಂಜೂರಾತಿ ಸೇರಿದಂತೆ ಇತರೆ ಎಲ್ಲ ಸರರ್ಕಾರದ ಆದೇಶಗಳನ್ನು ಕನ್ನಡದಲ್ಲಿ ಹೊರಡಿಸಬೇಕು. ಕಚೇರಿಗಳಲ್ಲಿ ಇರುವ ಆಂಗ್ಲ ಭಾಷೆಯ ನಮೂನೆ, ದಾಖಲೆ ಪುಸ್ತಕ, ಆಂತರಿಕ ಪತ್ರ ವ್ಯವಹಾರ ಸೇರಿ ಇತ್ಯಾದಿಗಳನ್ನು ಕನ್ನಡದಲ್ಲೇ ಭರ್ತಿ ಮಾಡಬೇಕು. ಕಡತದ ಟಿಪ್ಪಣಿ, ಸಭಾ ಸೂಚನೆ, ಕಾರ್ಯಸೂಚಿ, ಸಂಕ್ಷಿಪ್ತ ಟಿಪ್ಪಣಿ ಹಾಗೂ ನಡವಳಿಗಳನ್ನು ಕನ್ನಡದಲ್ಲೇ ತಯಾರಿಸಿ ಸರ್ಕಾರದ ಭಾಷಾ ನೀತಿಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಿಎಂ ಸೂಚನೆಯಂತೆ ಕ್ರಮ – ‘ಸರ್ಕಾರಿ ಪತ್ರ ಮತ್ತು ಕಡತ ಟಿಪ್ಪಣಿಗಳನ್ನು ಕನ್ನಡದಲ್ಲಿ ಇಲ್ಲದಿದ್ದರೆ ವಾಪಸ್ ಕಳಿಸಿ ಸೂಕ್ತ ಸಮಜಾಯಿಷಿ ಪಡೆಯಲು ಮುಖ್ಯಮಂತ್ರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಮತ್ತೊಮ್ಮೆ ಸ್ಪಷ್ಟ ಸುತ್ತೋಲೆ ಹೊರಡಿಸಲಾಗಿದೆ. ಆಡಳಿತದಲ್ಲಿ ಭಾಷಾ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಹಾಗೂ ಎಲ್ಲಾ ಹಂತಗಳಲ್ಲಿ ಜಾರಿಗೊಳಿಸುವುದು ಎಲ್ಲಾ ಅಧಿಕಾರಿಗಳು ಮತ್ತು ನೌಕರರ ಕರ್ತವ್ಯವಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.
ಆಡಳಿತದಲ್ಲಿ ಭಾಷಾ ನೀತಿಗೆ ಸಂಬಂಧಿಸಿದ ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ನು ಎಲ್ಲಾ ಇಲಾಖೆ, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯ ಹಾಗೂ ಅನುದಾನಿತ ಸಂಸ್ಥೆಗಳ ಸಿಬ್ಬಂದಿ ವರ್ಗ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಕೆಲವು ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ಕೆಡಿಪಿ ಸಭೆಯ ಕಾರ್ಯಸೂಚಿಯನ್ನು ಆಂಗ್ಲ ಭಾಷೆಯಲ್ಲಿvಹೊರಡಿಸುವುದು ಹಾಗೂ ಕಾಮಗಾರಿ ಮಾಹಿತಿಗಳನ್ನು ಆಂಗ್ಲ ಭಾಷೆಯಲ್ಲಿ ಮಂಡಿಸಲಾಗುತ್ತಿದೆ. ಈ ವಿಚಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸರ್ಕಾರಕ್ಕೆ ವರದಿ ಮಾಡಿದ್ದು, ಇನ್ನು ಮುಂದೆ ಈ ಸೂಚನೆಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ತಪ್ಪಿದರೆ ಸಂಬಂಧಪಟ್ಟವರನ್ನು ಹೊಣೆ ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಸ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಟೈಟಲ್ ಮೂಲಕ ಸಿನಿರಸಿಕರನ್ನು ಆಕರ್ಷಿಸುತ್ತಿದೆ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ.. ವಿಭಿನ್ನವಾಗಿದೆ “ಕಾಲವೇ ಮೋಸಗಾರ” ಚಿತ್ರ!
