ಟ್ರೇಲರ್​ನಲ್ಲೇ ಕುತೂಹಲ ಮೂಡಿಸಿರುವ “ಜಂಗಲ್ ಮಂಗಲ್” ಚಿತ್ರ ಜು.4ಕ್ಕೆ ತೆರೆಗೆ‌!

ನಟ ಯಶ್ ಶೆಟ್ಟಿ ಮತ್ತು ಹರ್ಷಿತಾ ರಾಮಚಂದ್ರ ನಟನೆಯ “ಜಂಗಲ್ ಮಂಗಲ್” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ರಕ್ಷಿತ್ ಕುಮಾರ್ ನಿರ್ದೇಶಿಸಿದ್ದು, ಟ್ರೇಲರ್​ನಲ್ಲೇ ಕುತೂಹಲ ಮೂಡಿಸಿರುವ ಜಂಗಲ್ ಮಂಗಲ್ ಚಿತ್ರ ಜುಲೈ 4 ರಂದು ತೆರೆಗೆ‌ ಬರಲಿದೆ.

ನಿರ್ದೇಶಕ ರಕ್ಷಿತ್ ಕುಮಾರ್ ಅವರು, ನಾನು ಮೊದಲು ಇಬ್ಬರು ಖ್ಯಾತ ನಿರ್ದೇಶಕರಿಗೆ ಧನ್ಯವಾದ ಹೇಳಬೇಕು. ನಮ್ಮ ಚಿತ್ರದ ಟ್ರೇಲರ್ ನೋಡಿದ ಯೋಗರಾಜ್ ಭಟ್ ಅವರು ಈ ಚಿತ್ರಕ್ಕೆ “ಜಂಗಲ್ ಮಂಗಲ್” ಎಂದು ಹೆಸರಿಡಿ ಎಂದರು. ಚಿತ್ರ ಮೆಚ್ಚಿಕೊಂಡ ಮತ್ತೊಬ್ಬ ನಿರ್ದೇಶಕ ಸಿಂಪಲ್ ಸುನಿ ತಮ್ಮ ಸುನಿ ಸಿನಿಮಾಸ್ ಬ್ಯಾನರ್ ಮೂಲಕ ಚಿತ್ರವನ್ನು ಅರ್ಪಿಸಲು ಹೇಳಿದರು. ಇದೊಂದು ಅರೆ ಮಲೆನಾಡಿನಲ್ಲಿ ನಡೆಯುವ ಕಥೆ. ನಾವೊಂದಿಷ್ಟು ಜನ ಸ್ನೇಹಿತರೆ ಸೇರಿ ನಿರ್ಮಾಣ ಮಾಡಿರುವ ಚಿತ್ರ. ಹತ್ತು ವರ್ಷಗಳಿಂದ ಕನ್ನಡ ಹಾಗೂ ತುಳು ಚಿತ್ರರಂಗದ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿರುವ ನನಗೆ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಇದು ಅರೆ ಮಲೆನಾಡಿನಲ್ಲಿ ನಡೆಯುವ ಕಥೆಯಾಗಿದ್ದರೂ, ಯೂನಿವರ್ಸಲ್ ಸಬ್ಜೆಕ್ಟ್ ಎನ್ನಬಹುದು. ಎಲ್ಲಾ ಪ್ರಾಂತ್ಯದಲ್ಲೂ ನಡೆಯುವ ಕಥೆಯೂ ಹೌದು‌. ಸಹ್ಯಾದ್ರಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪ್ರಜೀತ್ ಹೆಗಡೆ, ಸಂಕಲನಕಾರ ಮನು ಶೇಡ್ಗಾರ್ ಮುಂತಾದವರು ಬಂಡವಾಳ ಹಾಕಿದ್ದಾರೆ. ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತ ರಾಮಚಂದ್ರ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ಉಗ್ರಂ ಮಂಜು, ಬಲ ರಾಜವಾಡಿ ಮುಂತಾದವರಿದ್ದಾರೆ ಎಂದರು.

ನನಗೆ ನಾಯಕನಾಗಿಯೇ ನಟಿಸಬೇಕೆಂಬ ಆಸೆ ಇಲ್ಲ. ನಟನಾಗಿ ಗುರಿತಿಸಿಕೊಳ್ಳಬೇಕಷ್ಟೇ. ಆದರೆ ನಾನು ಮೊದಲು ನಾಯಕನಾಗಿ ನಟಿಸಿದ ಚಿತ್ರ “ಸೂಜಿದಾರ”. ಅದರಲ್ಲಿ ನಾನು ನಾಯಕನಾಗಿ ನಟಿಸಲು ಒಪ್ಪಿಕೊಳ್ಳಲು ಕಥೆಯೇ ಕಾರಣ. ಆನಂತರ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ಕಥೆಯೇ ಕಾರಣ. ನಿಜ ಹೇಳಬೇಕೆಂದರೆ ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ. ಇನ್ನೂ ನಮ್ಮ ಚಿತ್ರಕ್ಕೆ ನಿರ್ಮಾಪಕ ಪ್ರಜೀತ್ ಹೆಗಡೆ ಅವರ ಸಹಕಾರ ಅಪಾರ. ಚಿತ್ರತಂಡದ ಎಲ್ಲರ ಸಹಕಾರವನ್ನು ಮರೆಯುವ ಹಾಗಿಲ್ಲ‌. ಕೆ.ವಿ.ಎನ್ ಸಂಸ್ಥೆಯ ಸುಪ್ರೀತ್ ಜುಲೈ 4 ರಂದು ಬಿಡುಗಡೆಯಾಗಲಿರುವ ನಮ್ಮ ಚಿತ್ರದ ವಿತರಣೆಗೆ ಸಹಾಯ‌ ಮಾಡುತ್ತಿದ್ದಾರೆ ಎಂದು ನಾಯಕ ಯಶ್ ಶೆಟ್ಟಿ ಹೇಳಿದರು.

ದಿವ್ಯ ಎಂಬ ಮಧ್ಯಮ ವರ್ಗದ ಜವಾಬ್ದಾರಿಯುತ ಕರಾವಳಿ ಹೆಣ್ಣುಮಗಳ ಪಾತ್ರ ನನ್ನದು. ಅಂಗನವಾಡಿ ಶಿಕ್ಷಕಿಯ ಪಾತ್ರ ಎಂದು ತಮ್ಮ ಪಾತ್ರದ ಕುರಿತು ನಾಯಕಿ ಹರ್ಷಿತ ರಾಮಚಂದ್ರ ಹೇಳಿದರು. ನಿರ್ದೇಶಕ ರಕ್ಷಿತ್ ಕುಮಾರ್ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರದಲ್ಲಿ ಖಳನಾಯಕ. ಈ ಹಿಂದೆ ಮಾಡಿರುವ ಚಿತ್ರಗಳಿಗಿಂತ ಭಿನ್ನ ಪಾತ್ರ ಎಂದು ಉಗ್ರಂ ಮಂಜು ತಿಳಿಸಿದರು‌.

ಸಂಕಲನಕಾರ – ನಿರ್ಮಾಪಕರಲ್ಲೊಬ್ಬರಾದ ಮನು ಶೇಡ್ಗಾರ್ ಹಾಗೂ ಬಂಡವಾಳ ಹೂಡಿರುವ ಪ್ರಜೀತ್ ಹೆಗಡೆ ಅವರು ಮಾತನಾಡಿ ಜುಲೈ 4 ರಂದು ತೆರೆಗೆ ಬರುತ್ತಿರುವ ನಮ್ಮ “ಜಂಗಲ್ ಮಂಗಲ್” ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ ಪ್ರೋತ್ಸಾಹ ನೀಡಿ ಎಂದರು.

ಇದನ್ನೂ ಓದಿ : KRS ಉದ್ಯಾನವನದಲ್ಲಿ “ಕಾವೇರಿ ಆರತಿ” ಸಂಭ್ರಮ.. ಡಿಕೆಶಿ ನೇತೃತ್ವದಲ್ಲಿ ರೈತರು, ಅಧಿಕಾರಿಗಳ ಜೊತೆ ಸಭೆ!

Btv Kannada
Author: Btv Kannada

Read More