KRS ಉದ್ಯಾನವನದಲ್ಲಿ “ಕಾವೇರಿ ಆರತಿ” ಸಂಭ್ರಮ.. ಡಿಕೆಶಿ ನೇತೃತ್ವದಲ್ಲಿ ರೈತರು, ಅಧಿಕಾರಿಗಳ ಜೊತೆ ಸಭೆ!

ಮಂಡ್ಯ : ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಉದ್ಯಾನವನದಲ್ಲಿ ಆಯೋಜಿಸಲು ಉದ್ದೇಶಿಸಿರುವ ಕಾವೇರಿ ಆರತಿಗೆ ಸಂಬಂಧಿಸಿದಂತೆ ಸ್ಥಳೀಯ ರೈತರು, ಅಧಿಕಾರಿಗಳು ಹಾಗೂ ಪಾಲುದಾರರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದರು. ಇದೇ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾವೇರಿ ಆರತಿ ಬಗ್ಗೆ ಡಿಸಿಎಂ ಡಿಕೆಶಿ ಮಾಹಿತಿ ನೀಡಿದರು.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಕಾವೇರಿ ಆರತಿಯಿಂದ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಎಲ್ಲರನ್ನೂ ಸಮಾನವಾಗಿ ಪೊರೆಯುವ ಕಾವೇರಿ ಮಾತೆಗೆ ನಾವೆಲ್ಲರೂ ಪ್ರಾರ್ಥನೆ ಸಲ್ಲಿಸಲಿದ್ದೇವೆ. ಪ್ರಯತ್ನ ವಿಫಲವಾಗಬಹುದು,‌ ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ. ಮನಸ್ಸಿದ್ದಲ್ಲಿ ಮಾರ್ಗವಿದೆ, ಭಕ್ತಿ ಇದ್ದಲ್ಲಿ ಭಗವಂತನಿರುತ್ತಾನೆ ಎಂಬ ನಂಬಿಕೆ ನನಗಿದೆ ಎಂದರು.

ರೈತರಿಗಿದ್ದ ಎಲ್ಲಾ ಗೊಂದಲಗಳನ್ನು ಬಗೆಹರಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕಾವೇರಿ ಆರತಿಯನ್ನು ಮಾಡುತ್ತಿದ್ದೇವೆ. ಸ್ಥಳೀಯ ಪ್ರತಿನಿಧಿಗಳೂ ನಮಗೆ ಬೆಂಬಲವಾಗಿದ್ದಾರೆ. ಕಾವೇರಿ ಆರತಿಯಿಂದ ಡ್ಯಾಂಗೆ ಯಾವುದೇ ತೊಂದರೆಯಾಗುವುದಿಲ್ಲ. ವಿವಿಧ ಸಂಸ್ಕೃತಿಗಳ ಅನಾವರಣ, ಸಾವಿರಾರು ಉದ್ಯೋಗಗಳ ಸೃಷ್ಟಿ, ಪ್ರವಾಸೋದ್ಯಮದ ಅಭಿವೃದ್ಧಿ, ವ್ಯಾಪಾರ-ವಹಿವಾಟುಗಳ ವೃದ್ಧಿಯಾಗಲಿದೆ. ಕಾವೇರಿ ಮಾತೆಗೆ ನಾವೆಲ್ಲರೂ ಒಗ್ಗಟ್ಟಾಗಿ ದಸರಾದ ವೇಳೆ ವಿಜೃಂಭಣೆಯ ಆರತಿಯನ್ನು ಮಾಡಲಿದ್ದೇವೆ ಎಂದು ಡಿಸಿಎಂ ಡಿಕೆಶಿ ಹೇಳಿದರು.

ಇನ್ನು ಸ್ಯಾಂಕಿ ಟ್ಯಾಂಕ್‌ನಲ್ಲಿ ನಡೆದ ಕಾವೇರಿ ಆರತಿಗೆ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ವಿವಿಧ ಇಲಾಖೆಗಳ ಸಮನ್ವಯತೆ ಹಾಗೂ ಅನುದಾನದೊಂದಿಗೆ ಕೆಆ‌ರ್‌ಎಸ್‌ನಲ್ಲಿ ವೈಭವದ ಆರತಿಯನ್ನು ಮಾಡಲಾಗುವುದು. ಅಧ್ಯಯನ ತಂಡವೊಂದು ಉತ್ತರ ಭಾರತದ ಪ್ರವಾಸ ಮಾಡಿ, ಗಂಗಾ ಆರತಿಯನ್ನು ವೀಕ್ಷಿಸಿ, ವರದಿಯನ್ನೂ ನೀಡಿದ್ದಾರೆ. ಆ ವರದಿಯನ್ವಯ ಕಾವೇರಿ ಆರತಿಯ ಕುರಿತಂತೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ : 55 ಕೋಟಿ ರೂ. ನಕಲಿ ಕಾಮಗಾರಿ ಬಿಲ್ ಪ್ರಕರಣ – ಸಚಿವ ಜಮೀರ್, 19 ಇಂಜಿನಿಯರ್​ಗಳು ಹಾಗೂ 6 ಮಂದಿ ಕಾಂಟ್ರಾಕ್ಟರ್​ಗಳಿಗೆ ED ತನಿಖೆ ಸಂಕಷ್ಟ!

Btv Kannada
Author: Btv Kannada

Read More