ಬೆಂಗಳೂರು : ನಗರದಾದ್ಯಂತ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಪೊಲೀಸರು ಕಾಲ್ನಡಿಗೆ ಮೂಲಕ ಗಸ್ತು ಕರ್ತವ್ಯ ನಿರ್ವಹಿಸಬೇಕೆಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಗ್ರೌಂಡ್ ಲೆವೆಲ್ನಲ್ಲೇ ಕ್ರೈಂ ಕಂಟ್ರೋಲ್ ಮಾಡುವ ಹಿನ್ನೆಲೆ ಕಮಿಷನರ್ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಲು ಮತ್ತು ಪೊಲೀಸ್ ಉಪಸ್ಥಿತಿಯನ್ನು ಹೆಚ್ಚಿಸಲು ಬೀಟ್ ಸಿಬ್ಬಂದಿಯೊಂದಿಗೆ, ಹೊಯ್ಸಳ, ಚೀತಾ ವಾಹನದ ಸಿಬ್ಬಂದಿಗಳು ಮತ್ತು ಸಬ್ಇನ್ಸ್ಪೆಕ್ಟರ್ ಶ್ರೀಣಿಯ ಅಧಿಕಾರಿಗಳು ತಮ್ಮ ತಮ್ಮ ಠಾಣೆ ವ್ಯಾಪ್ತಿಗಳಲ್ಲಿ ಪ್ರತಿ ದಿನ ಸಂಜೆ ಕಾಲ್ನಡಿಗೆಯ ಮುಖಾಂತರ ಗಸ್ತು ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಯಾವಾಗಲೂ ಚೀತಾ ಹಾಗೂ ಹೊಯ್ಸಳ ವಾಹನಗಳಲ್ಲಿ ಸಿಬ್ಬಂದಿ ಗಸ್ತು ಮಾಡುತ್ತಿರುತ್ತಾರೆ. ಆದರೆ ಅವರು ಸ್ಥಳದಲ್ಲಿ ಖುದ್ದು ಹಾಜರಿದ್ದು, ಸೂಕ್ಮ ಪ್ರದೇಶಗಳು ಹಾಗೂ ಸರ್ಕಲ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಿ ಗಸ್ತು ಮಾಡುವುದರಿಂದ ಅಪರಾಧಗಳನ್ನು ನಿಯಂತ್ರಿಸಬಹುದಾಗಿದೆ.
ವಿಶೇಷವಾಗಿ ಸಂಜೆ ವೇಳೆಯಲ್ಲಿ ಮತ್ತು ವಾರದ ಕೊನೆಯ ದಿನಗಳಂದು ಸೂಕ್ಷ್ಮ ವಲಯಗಳಾದಂತಹ ಪ್ರಾರ್ಥನ ಸ್ಥಳಗಳು, ಮಾಲ್‌ಗಳು ಹಾಗೂ ಮಾರ್ಕೆಟ್‌ನಂತಹ ಹೆಚ್ಚು ಜನ ಸಂದಣಿ ಇರುವ ಸ್ಥಳಗಳಲ್ಲಿ ಕಾಲ್ನಡಿಗೆೆಯ ಮುಖಾಂತರ ನಮ್ಮ ಸಿಬ್ಬಂದಿ ಗಸ್ತು ಮಾಡಿದರೆ, ಯಾವುದೇ ಘರ್ಷಣೆಗಳಾಗಲೀ, ಕಾನೂನು ಬಾಹಿರ ಚಟುವಟಿಕೆಗಳಾಗಲೀ ನಡೆಯುವುದಿಲ್ಲ. ಒಂದು ವೇಳೆ ಅಂತಹ ಘಟನೆಗಳೇನಾದರೂ ನಡೆದರೆ ತಕ್ಷಣ ತಡೆಗಟ್ಟಬಹುದಾಗಿದೆ ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇನ್ನು, ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು ಹಾಗೂ ಎಲ್ಲಾ ಡಿಸಿಪಿಗಳ ಸಭೆ ನಡೆಸಿ, ಚರ್ಚಿಸಿ ಈ ಯೋಜನೆಗಳನ್ನು ಅಳವಡಿಸಲಾಗಿದೆ. ಪ್ರತಿ ದಿನ ಸಂಜೆ ವೇಳೆ ಠಾಣಾಧಿಕಾರಿಗಳು ಮತ್ತು ಎಸಿಪಿ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ರೌಡಿಶೀಟರ್‌ಗಳು, ಎಂಓಬಿ ವ್ಯಕ್ತಿಗಳು ಮತ್ತು ಯಾವ ಅವಧಿ ಹಾಗೂ ಪ್ರದೇಶಗಳಲ್ಲಿ ಹೆಚ್ಚಾಗಿ ಅಪರಾಧಿಕ ಕೃತ್ಯಗಳು ಜರುಗುತ್ತವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಡೆದು, ಅಂತಹ ಪ್ರದೇಶಗಳಲ್ಲಿ ಗಸ್ತನ್ನು ಹೆಚ್ಚಿಗೆ ಮಾಡಿ, ಪರಿಣಾಮಕಾರಿ ಮತ್ತು ಪೊಲೀಸ್ ಸ್ಪಂದಿಸುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಕಮಿಷನರ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಡಾಬಾಗೆ ನುಗ್ಗಿ ಮೂವರನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು!
