ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೇಡ್ ಮಾಡಿ ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ದಾಖಲೆ ವಶಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಆನೇಕಲ್, ಗದಗ, ಧಾರವಾಡ, ಕಲಬುರಗಿ ಹಾಗೂ ಬೆಳಗಾವಿಯ ವಿವಿಧೆಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಶಿವಮೊಗ್ಗ ವಿವಿ ಸಹ ಸಂಶೋಧನ ನಿರ್ದೇಶಕರ ಮನೆ ಮೇಲೆ ದಾಳಿ: ಸಾಗರ ತಾಲೂಕು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಪ್ರದೀಪ್ ಎಂಬವರ ಮನೆ ಮೇಲೆ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಶಿವಮೊಗ್ಗ ನಗರದ ಪ್ರಿಯಾಂಕ ಲೇಔಟ್ನಲ್ಲಿನ ಅವರ ವಾಸದ ಮನೆ ಮೇಲೆ ಬೆಳಗ್ಗೆ ದಾಳಿ ನಡೆದಿದೆ. ಇದರ ಜೊತೆಗೆ ಇವರು ಆಸ್ತಿ ಹೊಂದಿರುವ ಶಿಕಾರಿಪುರ ತಾಲೂಕು ಭದ್ರಾಪುರ ಗ್ರಾಮದ ತೋಟದ ಮನೆ ಹಾಗೂ ಹೊಸನಗರ ತಾಲೂಕಿನ ತೋಟದ ಮನೆ ಮೇಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಚಿನ್ನದ ಮತ್ತು ಬೆಳ್ಳಿಯ ಆಭರಣಗಳು, ಬೆಲೆಬಾಳುವ ವಾಚ್ಗಳು, ಆಸ್ತಿ ದಾಖಲಾತಿಗಳು, ಹಣಕಾಸು ದಾಖಲೆಗಳು ಪತ್ತೆಯಾಗಿದೆ. ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಶೋಧ ನಡೆಯುತ್ತಿದೆ.
ಧಾರವಾಡದಲ್ಲಿ ಲೋಕಾಯುಕ್ತ ದಾಳಿ: ಧಾರವಾಡದ ಮಲಪ್ರಭ ಪ್ರಾಜೆಕ್ಟ್ ಇಂಜಿನಿಯರ್ ಅಶೋಕ ವಲ್ಸಂದ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಗರದ ಕೆವಿಜಿ ಬ್ಯಾಂಕ್ ಬಳಿ ಇರುವ ಕ್ವಾರ್ಟರ್ಸ್, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಅಶೋಕ ಅವರಿಗೆ ಸೇರಿದ್ದೆನ್ನಲಾದ ಬೆಳಗಾವಿ, ಬಾಗಲಕೋಟೆ, ಜಮಖಂಡಿ ಮತ್ತು ಜಕನೂರಿನ ಮನೆ ಮೇಲೂ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪತ್ತೆ ಹಚ್ಚಿದ ಆಸ್ತಿ: ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ (ನೆಕ್ಲೆಸ್, ಪಾಟ್ಲಿ, ಬಿಲ್ವರ್ ಇತ್ಯಾದಿ), 2 ಕೆಜಿ ಬೆಳ್ಳಿ ಪಾತ್ರೆಗಳು, ಆರತಿ ತಟ್ಟೆ, ದೀಪಗಳು ಪತ್ತೆಯಾಗಿದೆ. ಅಕ್ರಮ ಆಸ್ತಿಯ ದಾಖಲೆಗಳು ಹಾಗೂ ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಿದ್ದಾರೆ.
ಗದಗ ಸಿಪಿಐ ಡಿಬಿ ಪಾಟೀಲ ಮನೆ ಮೇಲೆ ಹಣದ ದಾಳಿ : ಗದಗ ಸಿಪಿಐ ಡಿಬಿ ಪಾಟೀಲ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ವೇಳೆ 3 ಲಕ್ಷಕ್ಕೂ ಹೆಚ್ಚು ನಗದು (₹500, ₹200 ಮುಖಬೆಲೆಯ ನೋಟುಗಳಲ್ಲಿ), ಚಿಲ್ಲರೆ ಹಣ, ಬೆಳ್ಳಿ ಕಾಯಿನ್ ಪತ್ತೆಯಾಗಿದೆ. ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳಲ್ಲೂ ದಾಳಿ ಮಾಡಲಾಗಿದ್ದು, ಸಿಪಿಐ ಪಾಟೀಲ ಅವರ ಬಾಡಿಗೆ ಮನೆಯಲ್ಲಿ ನಗದು ಸಿಕ್ಕಿದ್ದು, ಭ್ರಷ್ಟಾಚಾರದ ಆರೋಪದ ಮೇಲೆ ತನಿಖೆ ಮುಂದುವರೆದಿದೆ.
ಚಿಕ್ಕಮಗಳೂರು ನಗರಸಭೆ ಲೆಕ್ಕಾಧಿಕಾರಿ ಮನೆ ಮೇಲೆ ದಾಳಿ:
ಚಿಕ್ಕಮಗಳೂರಿನ ನಗರಸಭೆ ಲೆಕ್ಕಾಧಿಕಾರಿ ಲತಾ ಮಣಿ ನಿವಾಸದ ಮೇಲೆ ದಾಳಿ ಲೋಕಾಯುಕ್ತ ದಾಳಿ. ಎರಡು ತಂಡಗಳ ಲತಾ ಮಣಿ ನಿವಾಸದಲ್ಲಿ ದಾಖಲೆ ಪರಿಶೀಲನೆ. ನಗರದ ಜಯನಗರ ಬಡಾವಣೆಯಲ್ಲಿ ಇರುವ ಲತಾ ಮಣಿ ನಿವಾಸ. ಚಿಕ್ಕಮಗಳೂರು ನಗರದ ಜಯನಗರ ಬಡಾವಣೆಯ ಮನೆಯಿಂದ ಕಚೇರಿಗೆ ಬಂದ ಅಧಿಕಾರಿಗಳ ತಂಡ. ಬೆಳಗ್ಗೆ ನಗರಸಭೆ ಲೆಕ್ಕಾಧಿಕಾರಿ ಲತಾಮಣಿ ಮನೆ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತರು. ನಗರಸಭೆಗೆ ಬಂದು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ನಗರಸಭೆ ಆಯುಕ್ತರನ್ನ ಕರೆಸಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ.
ಇದನ್ನೂ ಓದಿ : ಬಂಗಲೆ, ಫಾರ್ಮ್ ಹೌಸ್, 25 ಲಕ್ಷ, ಚಿನ್ನಾಭರಣ, ರೇಷ್ಮೆಸೀರೆ.. ಬಿಬಿಎಂಪಿ EE ಪ್ರಕಾಶ್ ಅಕ್ರಮ ಸಂಪತ್ತಿನ ಕೋಟೆ ಬಯಲು!
