ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಕದನ ವಿರಾಮ ಒಪ್ಪಂದಕ್ಕೆ ಬಂದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆದರೆ, ಇರಾನ್, ಟ್ರಂಪ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಕದನ ವಿರಾಮದ ಕುರಿತು ಯಾವುದೇ ಒಪ್ಪಂದ ಆಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಅಗರ್ಚಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮತ್ತೆ ಡೊನಾಲ್ಡ್ ಟ್ರಂಪ್ಗೆ ಇರಾನ್ ಗುಮ್ಮಿದೆ.
ಕದನ ವಿರಾಮ ಪ್ರಸ್ತಾಪವನ್ನು ಇರಾನ್ ಸ್ವೀಕರಿಸಲು ನಿರಾಕರಿಸಿದೆ ಅಂತಾ ಅಮೆರಿಕದ ಮಾಧ್ಯಮಗಳೂ ಕೂಡ ವರದಿ ಮಾಡಿವೆ. ಟ್ರಂಪ್ ಘೋಷಣೆ ಬೆನ್ನಲ್ಲೇ ವ್ಯತಿರಿಕ್ತ ಹೇಳಿಕೆ ನೀಡಿರುವ ಇರಾನ್, ನಾವು ಪ್ರತೀಕಾರದ ದಾಳಿಯನ್ನು ತೀವ್ರಗೊಳಿಸುತ್ತೇವೆ ಎಂದಿದೆ.
ಟ್ರಂಪ್ ಹೇಳಿದ್ದೇನು? ಇರಾನ್-ಇಸ್ರೇಲ್ ಯುದ್ಧ ನಿಲ್ಲಿಸಲು ಸಹಮತಿ ಸೂಚಿಸಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಟ್ರಂಪ್ ಸೋಶಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಲಾಗಿದ್ದು, ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಕದನ ವಿರಾಮ ನಡೆಯಲಿದೆ. ಕದನ ವಿರಾಮಕ್ಕೆ ಎರಡೂ ದೇಶಗಳು ಸಂಪೂರ್ಣವಾಗಿ ಒಪ್ಪಿಕೊಂಡಿವೆ ಎಂದಿದ್ದಾರೆ. 12 ದಿನಗಳ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಪ್ರತಿಯೊಂದು ಕದನ ವಿರಾಮದ ಸಮಯದಲ್ಲಿ, ಇನ್ನೊಂದು ಕಡೆಯವರು ಶಾಂತಿಯುತ ಮತ್ತು ಗೌರವಯುತವಾಗಿರುತ್ತಾರೆಂದು ಟ್ರಂಪ್ ಒತ್ತಿ ಹೇಳಿದ್ದಾರೆ. ಅಲ್ಲದೇ, ಎರಡೂ ದೇಶಗಳನ್ನು ಟ್ರಂಪ್ ಅಭಿನಂದಿಸಿದ್ದಾರೆ.
ಇನ್ನು ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಇಸ್ರೇಲ್ ಮತ್ತು ಇರಾನ್ ತೋರಿದ ಸಹಿಷ್ಣುತೆ, ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಟ್ರಂಪ್ ಶ್ಲಾಘಿಸಿದ್ದು, ಇದು ವರ್ಷಗಳ ಕಾಲ ನಡೆಯಬಹುದಾದ ಯುದ್ಧ ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು. ಆದರೆ, ಅದು ಆಗಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ. ದೇವರು ಇಸ್ರೇಲ್ ಅನ್ನು ಆಶೀರ್ವದಿಸಲಿ, ದೇವರು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ : ಹೆಚ್‌ಡಿಕೆ ವಿರುದ್ದದ ಭೂ ಒತ್ತುವರಿ ಕೇಸ್ – SIT ರಚನೆಗೆ ತಡೆ ನೀಡಿದ್ದ ಆದೇಶದ ಮರುಪರಿಶೀಲನೆಗೆ ಮುಂದಾದ ಹೈಕೋರ್ಟ್!
