ಹೆಚ್‌ಡಿಕೆ ವಿರುದ್ದದ ಭೂ ಒತ್ತುವರಿ ಕೇಸ್​ – SIT ರಚನೆಗೆ ತಡೆ ನೀಡಿದ್ದ ಆದೇಶದ ಮರುಪರಿಶೀಲನೆಗೆ ಮುಂದಾದ ಹೈಕೋರ್ಟ್‌!

ಬೆಂಗಳೂರು : ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ವ್ಯಾಪ್ತಿಯಲ್ಲಿನ ಸುಮಾರು 14 ಎಕರೆ ಸರ್ಕಾರಿ ಭೂಮಿಯ ಅನಧಿಕೃತ ಒತ್ತುವರಿ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ನೀಡಲಾಗಿದ್ದ ಮಧ್ಯಂತರ ತಡೆ ಏಕಪಕ್ಷೀಯ ಆದೇಶವಾಗಿದೆ ಎಂದು ರಾಜ್ಯ ಸರ್ಕಾರ ಸೋಮವಾರ ಬಲವಾಗಿ ಆಕ್ಷೇಪಿಸಿದೆ.

ಎಸ್‌ಐಟಿ ರಚನೆ ಆದೇಶಕ್ಕೆ ಮಧ್ಯಾಂತರ ತಡೆ ನೀಡಿದ್ದ ನ್ಯಾ| ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಹಾಜರಾದ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆದೇಶವು ಏಕಪಕ್ಷೀಯವಾಗಿದ್ದು, ಅರ್ಜಿ ಕುರಿತು ಕೂಡಲೇ ರಾಜ್ಯ ಸರ್ಕಾರದ ವಾದವನ್ನು ಆಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 195ರ ಅನುಸಾರ ರಾಜ್ಯ ಸರ್ಕಾರಕ್ಕೆ ಎಸ್‌ಐಟಿ ರಚಿಸುವ ಅಧಿಕಾರವಿದೆ. ಅಷ್ಟಕ್ಕೂ ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿಯೇ ಈ ಎಸ್‌ಐಟಿ ರಚಿಸಲಾಗಿದೆ ಎಂದು ವಿವರಿಸಿದ ಅವರು, ಮಧ್ಯಂತರ ತಡೆ ಆದೇಶ ತೆರವುಗೊಳಿಸುವಂತೆ ಕೋರಿದ ಮತ್ತು ರಿಟ್ ಅರ್ಜಿಗೆ ಸಂಬಂಧಿಸಿದ ಆಕ್ಷೇಪಣೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಬಳಿಕ ನ್ಯಾಯಪೀಠವು ಅಡ್ವಕೇಟ್ ಜನರಲ್ ಮನವಿಯಂತೆ ಪ್ರಕರಣದ ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಮಧ್ಯಾಂತರ ಆದೇಶವನ್ನು ನ್ಯಾಯಪೀಠ ಮುಂದುವರಿಸಿದೆ.

ಎಸ್‌ಐಟಿ ರಚಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿ ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಜೂನ್ 19ರಂದು ನಡೆಸಿದ್ದ ನ್ಯಾಯಾಲಯವು ಪ್ರತಿವಾದಿಗಳಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ರಾಮನಗರ ತಹಶೀಲ್ದಾರ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ, ಎಸ್‌ಐಟಿ ರಚನೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು.

ಇದನ್ನೂ ಓದಿ : ನಾನು ಶಾಸಕನಾಗಿ ಒಂದು ಚರಂಡಿ, ರಸ್ತೆ ಮಾಡಿಸೋಕೆ ಆಗ್ತಿಲ್ಲ – BR ಪಾಟೀಲ್, ರಾಜು ಕಾಗೆ ಬೆನ್ನಲ್ಲೇ N.Y ಗೋಪಾಲಕೃಷ್ಣ ಅಸಮಾಧಾನ!

Btv Kannada
Author: Btv Kannada

Read More