ಬೆಂಗಳೂರು : ಬೆಂಗಳೂರಿನ ಹೊರವಲಯ ಆನೇಕಲ್ನಲ್ಲಿ ಹಾಡಹಗಲೇ ಪುಂಡರ ಗುಂಪು ಯುವತಿಯೊಬ್ಬಳಿಗೆ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದೆ. ಮನೆಗೆ ದಿನಸಿ ಖರೀದಿಸಲು ಹೋಗುತ್ತಿದ್ದ ಯುವತಿಯ ಮೇಲೆ ಐದಾರು ಯುವಕರು ಲೈಂಗಿಕ ದೌರ್ಜನ್ಯ ನಡೆಸಿದೆ. ಯುವತಿ ಪ್ರತಿರೋಧ ತೋರಿದ್ದಕ್ಕೆ ಹಲ್ಲೆ ಕೂಡ ನಡೆಸಿದ್ದಾರೆ. ಕೂಡಲೇ ಯುವತಿಯ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ.
ಆನೇಕನ್ ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಘನಘೋರ ಘಟನೆ ನಡೆದಿದೆ. ಯುವತಿ ಜೊತೆ ಅಸಭ್ಯವಾಗಿ ವರ್ತನೆ ತೋರಿರುವ ಯುವಕರೆಲ್ಲರೂ ಗಾಂಜಾ ನಶೆಯಲ್ಲಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ರೇಣುಕಾ ಯಲ್ಲಮ್ಮ ಬಡಾವಣೆ ನಿವಾಸಿಯಾಗಿರುವ ಯುವತಿ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ದಿನಸಿ ತರಲು ಅಂಗಡಿಗೆ ಹೊರಟಿದ್ದಳು. ಈ ವೇಳೆ ಐದಾರು ಜನರು ಯುವಕರು ನಡುರಸ್ತೆಯಲ್ಲಿ ಯುವತಿಯನ್ನು ಅಡ್ಡ ಹಾಕಿದ್ದಾರೆ. ಬಳಿಕ, ಓರ್ವ ಯುವಕ ಯುವತಿಯ ಮೈಕೈ ಮುಟ್ಟಿ ಎಳೆದಾಡಿದ್ದಾನೆ. ಇದಕ್ಕೆ ಯುವತಿ ಪ್ರತಿರೋಧ ತೋರಿದ್ದಾಳೆ. ಆಗ, ಓರ್ವ ಯುವಕ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ.
ಈ ವೇಳೆ ಸ್ಥಳೀಯರು ಯುವತಿಯ ನೆರವಿಗೆ ಧಾವಿಸಿದ್ದಾರೆ. ನೆರವಿಗೆ ಧಾವಿಸಿದ ಸ್ಥಳೀಯರ ಮೇಲೂ ಯುವಕರು ಹಲ್ಲೆ ಮಾಡಿದ್ದಾರೆ. ಯುವತಿಯನ್ನು ಬಚಾವ್ ಮಾಡಿ ಸ್ಥಳೀಯರು ಮನೆ ಬಳಿ ಕರೆದುಕೊಂಡು ಬಂದರೂ ಬಿಡದ ಯುವಕರು, ಆಕೆಯ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಯುವತಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆ ಬಗ್ಗೆ ಸಂತ್ರಸ್ತ ಯುವತಿ ಹೇಳಿದ್ದೇನು?
ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಅಂಗಡಿ ಹೋಗುವ ಸಂದರ್ಭದಲ್ಲಿ ಯುವಕರು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಎಲ್ಲರೂ ಕುಡಿದಿದ್ದರು, ಗಾಂಜಾ ಹೊಡೆದಿದ್ದರು. ಆಗ, ಅವರು ನನ್ನ ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೊಡೆಯಲು ಮತ್ತು ಮುಟ್ಟಲು ಬಂದರು. ಈ ವೇಳೆ ಸ್ಥಳೀಯರು ನನ್ನ ರಕ್ಷಿಸಿದರು ಎಂದು ಹೇಳಿಕೆ ನೀಡಿದ್ದಾರೆ.
ಸ್ಥಳೀಯರು ಯುವಕರಿಗೆ ಹೊಡೆದರು. ನಾನೂ ಕೂಡ ಯುವಕರಿಗೆ ಹೊಡೆದೆ. ಸಾರ್ವಜನಿಕರಿಗೂ ಯುವಕರು ಹೊಡೆದರು. ಅಲ್ಲದೇ, ನನ್ನ ಮನೆ ಗೇಟ್ ಎಗರಿ ಒಳ ನುಗ್ಗಿದರು. ಏಳೆಂಟು ಜನ ಯುವಕರಿದ್ದರು. ಯುವಕರು ನಮ್ಮ ಮನೆ ಹಿಂದೆ ವಾಸವಾಗಿದ್ದಾರಂತೆ. ವಾರದ ಹಿಂದೆ ರೇಣುಕಾ ಯಲ್ಲಮ್ಮ ಬಡಾವಣೆ ಮನೆಗೆ ಶಿಫ್ಟ್ ಆಗಿದ್ದೆವು ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಮಕ್ಕಳ ಜೊತೆ ವಾಸವಿದ್ದೇನೆ ಎಂದರು.
ಹಲ್ಲೆ ಮತ್ತು ದೌರ್ಜನ್ಯ ನಡೆಸಿದ ಯುವಕರು ಯಾರೆಂದು ಗೊತ್ತಿಲ್ಲ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ನಾನು ದೂರು ನೀಡಿದ್ದೇನೆ. ನಾನು ನೀಡಿದ ದೂರು ಆಧರಿಸಿ FIR ದಾಖಲಿಸಲಾಗಿದೆ.
ಹಲ್ಲೆಗೀಡಾದ ಯುವತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಘಟನೆ ಸಂಬಂಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ “ತಿಮ್ಮನ ಮೊಟ್ಟೆಗಳು” ಚಿತ್ರ ಜೂ.27ಕ್ಕೆ ತೆರೆಗೆ!
