ಬೆಂಗಳೂರು : 2024ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಡಿಕೆ ಸುರೇಶ್ ಮತ್ತೆ ಹಾಲಿನ ರಾಜಕೀಯದಲ್ಲಿ ತೊಡಗಿಸಿಕೊಂಡು ಬಮೂಲ್ ಅಧ್ಯಕ್ಷರಾಗಿ ತಮ್ಮ ರಾಜಕೀಯ ಮುನ್ನಲೆಗೆ ಬಂದಿದ್ರು. ಆದ್ರೆ ಡಿಕೆ ಸುರೇಶ್ಗೆ ನಕಲಿ ತಂಗಿ ಸಂಕಷ್ಟ ಮಾತ್ರ ಬಿಟ್ಟು ಹೋಗ್ತಿಲ್ಲ. ವಂಚಕಿಯೊಬ್ಬಳ ಜೊತೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ಡಿಕೆ ಸುರೇಶ್ಗೆ ಶಾಪವಾಗಿ ಪರಿಣಮಿಸಿದೆ.
ಐಶ್ವರ್ಯಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿಕೆ ಸುರೇಶ್ಗೆ ಇಡಿ ನೋಟಿಸ್ ನೀಡಿತ್ತು. ಈ ಹಿನ್ನೆಲೆ ಇಂದು ಡಿಕೆ ಸುರೇಶ್ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ತೆರಳುವ ಮುನ್ನ ಪ್ರತಿಕ್ರಿಯಿಸಿ ಅವರು, ಐಶ್ವರ್ಯ ಗೌಡ ಜೊತೆ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ಇಂದು ಬೆಳಗ್ಗೆ 11ಕ್ಕೆ ಗಂಟೆಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ರು. ಕೆಲ ಮಾಹಿತಿ ಕೇಳಿದ್ರು, ನಮ್ಮ ವಕೀಲರ ಜೊತೆ ವಿಚಾರಣೆಗೆ ಹಾಜರಾಗ್ತಿದ್ದೇನೆ, ED ಅಧಿಕಾರಿಗಳು ನನಗೆ ಯಾಕೆ ನೋಟಿಸ್ ಕೊಟ್ಟರು ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.
ನನ್ನ ಸಹೋದರಿ ಅಂತ ಮೌಖಿಕವಾಗಿ ಹೇಳಿ ಐಶ್ವರ್ಯ ಮೋಸ ಮಾಡಿದ್ದಾರೆ, ಐಶ್ವರ್ಯ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ED ಅಧಿಕಾರಿಗಳ ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ, ನನಗಾಗಲಿ, ಆಯಮ್ಮನಿಗಾಗಲಿ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ನಾನು ಐಶ್ವರ್ಯ ಗೌಡ ಅವರ 2 ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ. ನನ್ನ ಕ್ಷೇತ್ರದಲ್ಲಿ ಇರುವ ಕಾರಣಕ್ಕೆ ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ, ಐಶ್ವರ್ಯ ನನ್ನ ಗೃಹ ಕಚೇರಿಯಲ್ಲಿ 3-4 ಬಾರಿ ಭೇಟಿ ಮಾಡಿದ್ರು. ನನ್ನ ಧ್ವನಿ ಮಿಮಿಕ್ರಿ ಮಾಡಿ ಬೇರೆಯವರಿಗೆ ಮೋಸ ಮಾಡಿದ್ದಾರೆ, ಇದನ್ನು ಹೊರತುಪಡಿಸಿದರೆ ಬೇರೆ ಏನೂ ಇಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಪುರಾಣ ಪ್ರಸಿದ್ಧ ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ – ಇನ್ಮುಂದೆ ಅರೆಬರೆ ಬಟ್ಟೆ ಧರಿಸಿ ಬಂದ್ರೆ ನೋ ಎಂಟ್ರಿ!
