ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಜಿಲ್ಲೆಯ ಪುರಾಣ ಪ್ರಸಿದ್ಧ ಸ್ಥಳವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಈಗಾಗಲೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಭಟ್ಕಳ ತಾಲೂಕಿನ ಪುರಾಣ ಪ್ರಸಿದ್ಧ ಶಿವ ಕ್ಷೇತ್ರವಾದ ಮುರುಡೇಶ್ವರ ದೇವಾಲಯದಲ್ಲೂ ಆಡಳಿತ ಮಂಡಳಿ ವಸ್ತ್ರ ಸಂಹಿತೆ ಜಾರಿಗೆ ತಂದಿದೆ.
ಮುರುಡೇಶ್ವರ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದ್ದು, ಪ್ರತಿ ದಿನ ಲಕ್ಷಾಂತರ ಜನ ಭಕ್ತರು, ಪ್ರವಾಸಿಗರು ಮುರುಡೇಶ್ವರಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಸಮುದ್ರ ತೀರದಲ್ಲಿ ಜಲಸಾಹಸ ಕ್ರೀಡೆ, ಸ್ಕೂಬಾ ಡೈವ್‌ಗಳು ಪ್ರಸಿದ್ಧವಾಗಿದ್ದು, ಬೃಹತ್ ಶಿವನ ಮೂರ್ತಿ ವಿಶ್ವ ವಿಖ್ಯಾತಿ ಪಡೆದಿದೆ.
ಇಲ್ಲಿಗೆ ಬರುವ ಪ್ರವಾಸಿಗರು ಕಡಲ ತೀರಕ್ಕೆ ಭೇಟಿ ನೀಡಿದ ನಂತರ ಶಿವನ ದೇವಾಲಯಕ್ಕೂ ಭೇಟಿ ಕೊಡುತ್ತಾರೆ. ಈ ವೇಳೆ ಪುರುಷರು ಚಡ್ಡಿ, ಬನಿಯನ್‌ನಲ್ಲಿ ಬಂದರೆ, ಮಹಿಳೆಯರು ಸಹ ಧಾರ್ಮಿಕ ಸ್ಥಳದಲ್ಲಿ ಧರಿಸಬೇಕಾದ ವಸ್ತ್ರ ಧರಿಸದೇ ಆಕ್ಷೇಪಾರ್ಹ ರೀತಿಯಲ್ಲಿ ದೇವರ ದರ್ಶನಕ್ಕೆ ಬರುತಿದ್ದರು. ಆಸ್ತಿಕ ಭಕ್ತರು ಈ ಬಗ್ಗೆ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿ ತರುವಂತೆ ಮನವಿ ಮಾಡಿದ್ದರು.
