ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗುವ ಉದ್ದೇಶ ಹೊಂದಿದ್ದಾರೆ. ಇದೇ ವೇಳೆ ‘ಕೈ’ ವರಿಷ್ಠರನ್ನು ಭೇಟಿ ಆಗಲಿರುವ ಸಿಎಂ, ರಾಜ್ಯ ರಾಜಕೀಯದ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಮಂಗಳವಾರ ರಾಷ್ಟ್ರಪತಿ ಭೇಟಿಗೆ ಸಮಯ ಕೇಳಿದ್ದಾರೆ. 5 ಪ್ರಮುಖ ವಿಧೇಯಕಗಳು ಸೇರಿ ಸುಮಾರು 24 ವಿಧೇಯಕಗಳಿಗೆ ರಾಜ್ಯಪಾಲರು ಇನ್ನೂ ಅಂಕಿತ ಹಾಕಿಲ್ಲ. ಈ ಹಿನ್ನೆಲೆ ಗವರ್ನರ್ ವಿರುದ್ಧ ಸಿಎಂ ದೂರು ನೀಡುವ ಸಾಧ್ಯತೆಯೂ ಇದೆ. ಬಿಲ್ಗಳಿಗೆ ಅಂಕಿತ ಹಾಕಿಸಲು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಲಿದ್ದಾರೆ. ಇನ್ನು, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರಲ್ಲಿ ಸಿಎಂ ಕೇಳಿಕೊಳ್ಳಲಿದ್ದಾರೆ. ಜೊತೆಗೆ ಇತರ ಇಲಾಖೆಗಳ ಸಚಿವರನ್ನೂ ಭೇಟಿಯಾಗುವ ನಿರೀಕ್ಷೆಯಿದೆ.
ಪರಿಷತ್ ನೇಮಕ ಪಟ್ಟಿಗೆ ಸಿಗುತ್ತಾ ಗ್ರೀನ್ ಸಿಗ್ನಲ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಿಲ್ಲಿ ಪ್ರವಾಸದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದಲ್ಲಿ ಮತ್ತೆ ಸಂಪುಟ ಪುನಾರಚನೆ, ನಿಗಮ ಮಂಡಳಿ ನೇಮಕ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಪರಿಷತ್‌ಗೆ ನಾಲ್ವರನ್ನು ನಾಮನಿರ್ದೇಶನ ಮಾಡುವ ಪಟ್ಟಿಗೆ ಹೈಕಮಾಂಡ್ ಈಗಾಗಾಲೇ ತಡೆ ನೀಡಿದ್ದು, ತಡೆಹಿಡಿಯಲಾದ ಇದೇ ಪಟ್ಟಿಗೆ ಅನುಮತಿ ನೀಡುವಂತೆ ಹೈಕಮಾಂಡ್‌ಗೆ ಸಿಎಂ ಒತ್ತಡ ಹೇರುವ ಸಾಧ್ಯತೆ ಇದೆ.
ಈ ಮೊದಲು ಖಾಲಿ ಇರುವ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಸಿಎಂ ಮಾಜಿ ಮಾಧ್ಯಮ ಹೈಕಮಾಂಡ್ ಸಲಹೆಗಾರ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ದಲಿತ ಮುಂದಿಡಲಿರುವ ಮುಖಂಡ ಡಿ.ಜಿ.ಸಾಗರ್ ಮತ್ತು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿ ಕೃಷ್ಣ ಹೆಸರುಗಳು ಒಳಗೊಂಡ ಪಟ್ಟಿ ಸಿದ್ದಗೊಂಡಿತ್ತು.
ಆದರೆ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೈಕಮಾಂಡ್ ಪರಿಷತ್ ನೇಮಕ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸದಂತೆ ತಡೆ ನೀಡಿತ್ತು. ಆ ಬಳಿಕ ದೆಹಲಿಗೆ ಸಿಎಂ, ಡಿಸಿಎಂ ಅವರನ್ನು ಕರೆಸಿಕೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಹುಲ್ ಗಾಂಧಿ, ಸುರ್ಜೇವಾಲಾ ಪಟ್ಟಿ ಪರಿಷ್ಕರಣೆಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆ ಇದೀಗ ಪಟ್ಟಿ ಪರಿಷ್ಕರಣೆಯಾಗಿದೆ. ಪರಿಷ್ಕೃತಪಟ್ಟಿಗೆ ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್.ನಟರಾಜ್, ಮಾಜಿ ಶಾಸಕ ಬಿ.ಎಲ್.ಶಂಕರ್ ಸೇರಿ ಕೆಲವರ ಹೆಸರು ಸೇರ್ಪಡೆಗೊಂಡಿವೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಿಂದ ಬಂದ ಮೇಲೆ ರಾಜ್ಯ ಸರ್ಕಾರದ ಬಾಕಿ ಇರುವ 23 ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು ಮತ್ತು 1300 ಸದಸ್ಯರ ನೇಮಕ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ಇದೇ ವೇಳೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೊಳ್ಳುವ ಸಾಧ್ಯತೆಗಳಿವೆ.
ಸಹಜವಾಗಿ ಸಿಎಂ ದೆಹಲಿ ಪ್ರವಾಸ ಕಾರಣ, ಸಂಪುಟ ಪುನಾರಚನೆ, ನಿಗಮ ಮಂಡಳಿ ನೇಮಕ ವಿಚಾರದ ಚರ್ಚೆ ಗರಿಗೆದರಿದೆ. ಒಟ್ಟಾರೆ, ಸಿಎಂ ಡೆಲ್ಲಿ ಪ್ರವಾಸ ಈ ಬಾರಿ ಸಾಕಷ್ಟು ವಿಶೇಷತೆ ಹೊಂದಿದೆ.
ಇದನ್ನೂ ಓದಿ : ಆಡಿಯೋ ವೈರಲ್ ಬೆನ್ನಲ್ಲೇ ಶಾಸಕ ಬಿ.ಆರ್ ಪಾಟೀಲ್ಗೆ ಸಿಎಂ ಸಿದ್ದರಾಮಯ್ಯ ಬುಲಾವ್!
