ಕರ್ನಾಟಕದಲ್ಲಿ ಪ್ಲಾಸ್ಟಿಕ್​ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ – ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ CS ಶಾಲಿನಿ ರಜನೀಶ್ ಸೂಚನೆ!

ಬೆಂಗಳೂರು : ಕರ್ನಾಟಕದಲ್ಲಿ ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಈ ಪ್ಲಾಸ್ಟಿಕ್‌ ತ್ಯಾಜ್ಯ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಪರಿಸರ, ಮನುಷ್ಯ, ಪ್ರಾಣಿಗಳು, ಸಸ್ಯಗಳ ಮೇಲೆ ದುಷ್ಪರಿಣಾಮವನ್ನು ಬೀರಿದ್ದು, ಪ್ಲಾಸ್ಟಿಕ್‌ನಿಂದ ತಯಾರಿಸಿದ ಅನೇಕ ಉತ್ಪನ್ನಗಳು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯವನ್ನುಂಟು ಮಾಡುತ್ತಿವೆ.

ರಾಜ್ಯದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಇದ್ದರೂ, ಇದರ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಏಕ ಬಳಕೆಯ ಪ್ಲಾಸ್ಟಿಕ್​ಗಳನ್ನು ಇಂದಿಗೂ ಬಳಕೆ ಮಾಡುತ್ತಿದ್ದಾರೆ. ಬೆಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಇದರ ಬಳಕೆ ಹೆಚ್ಚಿದೆ.

ರಸ್ತೆಗಳಲ್ಲಿ ಮತ್ತು ಕಾಲುವೆಗಳಲ್ಲಿಯ ಪ್ಲಾಸ್ಟಿಕ್ ಕಸದ ರಾಶಿಗಳು, ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಪರಿಸರ ಹಾಗೂ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ  ಇದೀಗ ಸಿಎಂ ಸಿದ್ದರಾಮಯ್ಯ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಹಾಗೂ Plastic Waste Management Rules, 2016 (Amended in 2021) 120 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಎಲ್ಲಾ ಕೆಲವು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ, ಸಂಗ್ರಹಣೆ, ವಿತರಣಾ ಹಾಗೂ ಬಳಕೆ ನಿಷೇಧಿಸಲಾಗಿದೆ. ಈ ನಿಯಮಗಳನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲಾ ಇಲಾಖೆಗಳ ಸೂಚಿಸಲಾಗಿದೆ.

ಏನೆಲ್ಲಾ ಸೂಚನೆಗಳು : 

1. ಸ್ಥಳೀಯ ಸಂಸ್ಥೆಗಳ (BBMP, ನಗರ ಪಾಲಿಕೆಗಳು, ಪುರಸಭೆಗಳು, ಜಿಲ್ಲೆ/ತಾಲ್ಲೂಕು/ಗ್ರಾಮ ಪಂಚಾಯತ್) ಮೂಲಕ ರಸ್ತೆ ಮತ್ತು ಕಾಲುವೆಗಳಲ್ಲಿ ಪ್ಲಾಸ್ಟಿಕ್ ಕಸ ವಿಲೇವಾರಿ ಹಾಗೂ ದಂಡ ವಿಧಿಸುವ ಕಾರ್ಯಾಚರಣೆ ತ್ವರಿತವಾಗಿ ಜಾರಿಗೆ ತರಬೇಕು.

2. ಏಕ ಬಳಕೆಯ ಪ್ಲಾಸ್ಟಿಕ್ (Single Use Plastic – SUP) ತಯಾರಕರು ಹಾಗೂ ಮಾರಾಟದ ಮೇಲ್ವಿಚಾರಣೆಗೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧೀನ ಇಲಾಖೆಗಳಿಗೆ ಸೂಚನೆ ನೀಡಬೇಕು.

3. ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಾರ್ವಜನಿಕ ಶಿಕ್ಷಣ ಮತ್ತು ಮಾಧ್ಯಮದ ಜತೆಗೂಡಿ ಅಭಿಯಾನ ಕೈಗೊಳ್ಳಬೇಕು.

4. ತಮ್ಮ ಇಲಾಖೆಯ ವ್ಯಾಪ್ತಿಯ ಎಲ್ಲಾ ಕಚೇರಿಗಳು ಮತ್ತು ಘಟಕಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ (Single Use Plastic – SUP) ಬಳಕೆಯನ್ನು ತಕ್ಷಣದಿಂದಲೇ ನಿಷೇಧಿಸುವಂತೆ ಕ್ರಮ ಕೈಗೊಳ್ಳುವುದು.

ಈ ನಿಟ್ಟಿನಲ್ಲಿ ಕೈಗೊಳ್ಳಲಾಗುವ ಕ್ರಮಗಳ ವರದಿಯನ್ನು 15 ದಿನಗಳೊಳಗೆ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ‘ಅಪ್ಪು ಕಪ್ ಸೀಸನ್ 3’ಗೆ ಅಶ್ವಿನಿ ಪುನೀತ್ ರಾಜಕುಮಾರ್ ಚಾಲನೆ – ತಂಡಗಳು, ಟೀಂ ಕ್ಯಾಪ್ಟನ್‌ಗಳ ಲಿಸ್ಟ್‌ ಇಲ್ಲಿದೆ ನೋಡಿ!

Btv Kannada
Author: Btv Kannada

Read More