ಮಂಡ್ಯದ ಮೈಶುಗರ್ ಸ್ಕೂಲ್ ಮೇಲೆ ಖಾಸಗಿ ಕಣ್ಣು – ನೂರಾರು ಕೋಟಿ ಮೌಲ್ಯದ ಶಾಲೆ ಆಸ್ತಿ‌ ಕಬಳಿಸಲು ಹುನ್ನಾರ!

ಮಂಡ್ಯ : ಮಂಡ್ಯದ ಮೈಶುಗರ್ ಶಾಲೆ ಮೇಲೆ ಖಾಸಗಿಯವರ ಕಣ್ಣು ಬಿದಿದ್ದು, ನೂರಾರು ಕೋಟಿ ಮೌಲ್ಯದ ಶಾಲೆ ಆಸ್ತಿ‌ ಕಬಳಿಸಲು ಹುನ್ನಾರ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಮೈಶುಗರ್ ಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಸ್ತಾವನ್ನು ಕೈಬಿಡುವಂತೆ ಆಗ್ರಹಿಸಲಾಗಿದ್ದು, ಮೈಶುಗರ್ ಶಾಲಾ ಆಡಳಿತ ಮಂಡಳಿಯ ನಿರ್ಧಾರಕ್ಕೆ  ರೈತ ಸಂಘಟನೆಗಳು, ಹಳೆಯ ವಿದ್ಯಾರ್ಥಿಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಟು ಮೈಸೂರು ಹೆದ್ದಾರಿ ಪಕ್ಕದಲ್ಲೇ 13 ಎಕರೆ ಶಾಲೆ ಜಾಗವಿದ್ದು, ಇದೇ ಜಾಗದ ಮೇಲೆ ಖಾಸಗಿಯವರ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ. ಗುತ್ತಿಗೆ ಕೊಡುವ ನೆಪದಲ್ಲಿ ಶಾಲೆಯ ಆಸ್ತಿ ಕಬಳಿಸಲು ಸ್ಕೆಚ್ ಹಾಕಲಾಗಿದ್ದು, ಕೋಟ್ಯಂತರ ಮೌಲ್ಯದ ಜಾಗ‌ ಕಬಳಿಸುವ ಹುನ್ನಾರ ನಡೆದಿದೆ ಎಂದು ಆರೋಪ ಕೇಳಿಬಂದಿದೆ.

ಹೌದು.. ಆರ್ಥಿಕ‌ ಹೊರೆ ನೆಪದಲ್ಲಿ ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್​ಸಿ ಬಿ.ರಾಮಕೃಷ್ಣ ಮಾಲೀಕತ್ವದ ಕೀರ್ತನಾ ಟ್ರಸ್ಟ್​​​ಗೆ ಗುತ್ತಿಗೆ ನೀಡಲು ಮೈಶುಗರ್ ಶಾಲಾ ಮಂಡಳಿ ಮುಂದಾಗಿದೆ.​​ ಆದರೆ ಈ ಗುತ್ತಿಗೆ ನಿರ್ಧಾರದ ವಿರುದ್ಧ ರೈತರು ಮತ್ತು ಹಳೇ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1949ರಲ್ಲಿ ಆರಂಭವಾಗಿದ್ದ ಶಾಲೆ ಇತ್ತೀಚೆಗೆ‌ ಅಮೃತ ಮಹೋತ್ಸವ ಆಚರಣೆ ಮಾಡಲಾಗಿದೆ. ಇಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಶಾಲೆ ನಡೆಸಲು ಸಾಧ್ಯವಾಗದಿದರೆ ಹಳೇ‌ ವಿದ್ಯಾರ್ಥಿಗಳೇ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಶಾಲೆಯನ್ನು ಗುತ್ತಿಗೆ ನೀಡಬಾರದು. ಈ ನಿರ್ಧಾರ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಶಾಲಾ ಆಡಳಿತ ಮಂಡಳಿಗೆ ರೈತರು ಮತ್ತು ಹಳೇ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ಇತಿಹಾಸ ಪ್ರಸಿದ್ಧ ಮೈಶುಗರ್ ಫ್ಯಾಕ್ಟರಿಯಷ್ಟೇ ಪ್ರಸಿದ್ಧವಾಗಿರುವ ಮೈಶುಗರ್ ಶಾಲೆಯನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡುವ ಮೈಶುಗರ್ ಶಾಲಾ ಮಂಡಳಿಯ ನಿರ್ಧಾರ ನಿಜಕ್ಕೂ ಖಂಡನೀಯ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ. ಕುಮಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : KREIS ಭ್ರಷ್ಟ ಸೂಪರಿಂಟೆಡ್ ಮಂಜುನಾಥ್ ವಿರುದ್ಧ ದಿಟ್ಟ ಕ್ರಮಕ್ಕೆ ಆದೇಶಿಸಿದ ಖಡಕ್ IAS ಅಧಿಕಾರಿ ಮಣಿವಣ್ಣನ್!

Btv Kannada
Author: Btv Kannada

Read More