ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವವನ್ನು ‘ಯಜಮಾನರ ಅಮೃತ ಮಹೋತ್ಸವ’ವೆಂದು ಆಚರಿಸಲು ಡಾ. ವಿಷ್ಣು ಸೇನಾ ಸಮಿತಿಯು ನಿರ್ಧರಿಸಿದೆ. ಈ ಅಮೃತ ಮಹೋತ್ಸವದ ನೇತೃತ್ವವನ್ನು ಖ್ಯಾತ ಚಲನಚಿತ್ರ ನಿರ್ದೇಶಕರು ಮತ್ತು ಡಾ. ವಿಷ್ಣುವರ್ಧನ್ ಅವರ ಆಪ್ತರಾದ ಎಸ್. ನಾರಾಯಣ್ ಅವರು ವಹಿಸಿಕೊಂಡಿದ್ದು, ಮಾರ್ಗದರ್ಶಕರಾಗಿ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರು ಜೊತೆಯಾಗಿದ್ದಾರೆ. ಈ ವಿಷಯವಾಗಿ ಇಂದು ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನರಸಿಂಹಲು, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಉಮೇಶ್ ಬಣಕಾರ್, ಮತ್ತೊಬ್ಬ ನಿರ್ಮಾಪಕರಾದ ರಮೇಶ್ ಯಾದವ್, ಎಸ್ ನಾರಾಯಣ್, ರಾಜೇಂದ್ರಸಿಂಗ್ ಬಾಬು ಭಾಗವಹಿಸಿದ್ದರು.
ಈ ವೇಳೆ ರಾಕ್ ಲೈನ್ ವೆಂಕಟೇಶ್ ಅವರು ಅನಿವಾರ್ಯ ಕಾರಣಗಳಿಂದ ಅನುಪಸ್ಥಿತರಾಗಿದ್ದು, ಈ ಘನಕಾರ್ಯಕ್ಕೆ ಸಂದೇಶವನ್ನು ಕಳುಹಿಸಿಕೊಟ್ಟು ಶುಭ ಹಾರೈಸಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವು ಈ ಹೊತ್ತಿನ ಅಗತ್ಯವಾಗಿದ್ದು, ಎಲ್ಲ ನಟರಿಗೂ ಅಂಥದ್ದೊಂದು ಗೌರವ ಸಂದಿದ್ದರೂ, ವಿಷ್ಣುವರ್ಧನ್ ಅವರಿಗೆ ಅಂಥಹ ಗೌರವ ಸಿಕ್ಕಿಲ್ಲವಾದ್ದರಿಂದ, ಕನ್ನಡ ಚಲನಚಿತ್ರರಂಗದಲ್ಲಿ ಇಂಥದ್ದೊಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವ ತುರ್ತು ಇರುವುದರಿಂದ ಸಮಸ್ತ ಕಲಾವಿದರ ಸಂಘ ಮತ್ತು ಕಲಾವಿದರು ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಹಾಗೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನರಸಿಂಹಲು ಅವರು, ವಾಣಿಜ್ಯ ಮಂಡಳಿಯು ಈ ಕಾರ್ಯಕ್ರಮಕ್ಕೆ ಕೇವಲ ಸಹಕಾರವನ್ನಲ್ಲದೆ ಸಹಭಾಗಿತ್ವವನ್ನು ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿದರು. ನಿರ್ಮಾಪಕರ ಸಂಘದ ಉಮೇಶ್ ಬಣಕಾರ್ ಅವರು ಕೂಡ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ರಾಜೇಂದ್ರಸಿಂಗ್ ಬಾಬು ಅವರು, ಈ ಅಮೃತ ಮಹೋತ್ಸವಕ್ಕೆ ಭಾರತೀಯ ಚಿತ್ರರಂಗದ ವಿಷ್ಣುವರ್ಧನ್ ಅವರ ಆಪ್ತರನ್ನೆಲ್ಲ ಆಹ್ವಾನಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಜೊತೆಗೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಚಿತ್ರರಂಗದ ಖ್ಯಾತ ನಟರನ್ನು ಈ ಅಮೃತ ಮಹೋತ್ಸವಕ್ಕೆ ಹಾಜರಾಗುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು. ನಂತರ ಎಸ್. ನಾರಾಯಣ್ ಅವರು, ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿ, ಇದಕ್ಕೆ ಕನ್ನಡದ ಸಮಸ್ತ ಚಿತ್ರರಂಗ ಭಾಗವಹಾಸಲಿದೆ ಎಂಬ ಭರವಸೆಯ ಜೊತೆಗೆ, ಈಗಾಗಲೇ ಅಮರನಟ ಎಂಬ ಕಾರ್ಯಕ್ರಮವನ್ನು ಡಾ. ರಾಜ್ ಕುಮಾರ್ ಅವರ ಹೆಸರಲ್ಲಿ , ಅಂಬಿ ಸಂಭ್ರಮ ಎನ್ನುವ ಕಾರ್ಯಕ್ರಮವನ್ನು ಡಾ. ಅಂಬರೀಷ್ ಅವರ ಹೆಸರಲ್ಲಿ ಆಯೋಜಿಸಿದ ಅನುಭವ ತನಗಿರುವುದರಿಂದ, ಕನ್ನಡ ಚಿತ್ರರಂಗದ ತ್ರಿಮೂರ್ತಿಗಳಲ್ಲೊಬ್ಬರದ ಡಾ. ವಿಷ್ಣುವರ್ಧನ್ ಅವರ ಕಾರ್ಯಕ್ರಮದಲ್ಲೂ ಭಾಗಿಯಾಗುವ ಭಾಗ್ಯ ನನಗೆ ದಕ್ಕಿರುವುದು ತಮ್ಮ ಪುಣ್ಯ ಎಂಬ ಸಂತೋಷವನ್ನು ಹೊರಹಾಕಿದರು.
ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು, ಈ ಕಾರ್ಯಕ್ರಮಕ್ಕೆ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಬೂಸ್ಟರ್ ಡೋಸ್ ಕಾರ್ಯಕ್ರಮವಾಗಿ ಕೆಲಸ ಮಾಡಲಿದೆ. ಡಾ. ವಿಷ್ಣುವರ್ಧನ್ ಅವರಿಗೆ ಆದ ಅನೇಕ ನೋವುಗಳಿಗೆ ಉತ್ತರವಾಗಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ ಮತ್ತು ಇಡೀ ರಾಜ್ಯಾದ್ಯಂತ ದಸರಾ ರೀತಿಯಲ್ಲಿ ಈ ಉತ್ಸವವನ್ನು ಆಯೋಜಿಸಬೇಕೆಂದು ಕರೆ ನೀಡಿದರು.
ಇದನ್ನೂ ಓದಿ : ಜಗನ್ ಮೋಹನ್ ರೆಡ್ಡಿ ರ‍್ಯಾಲಿ ವೇಳೆ ಅವಘಡ – ಕಾರಿನಡಿ ಸಿಲುಕಿ ವ್ಯಕ್ತಿ ಸಾವು!
