ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ದುಪ್ಪಟ್ಟು ದರ ವಸೂಲಿಗಿಳಿದ ಆಟೋ ಚಾಲಕರು!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿಗಿಳಿದಿದ್ದಾರೆ. ಹಾಗಾಗಿ ವಾರಗಳಿಂದ ಆಟೋ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಬಾಡಿಗೆ ವಿಚಾರವಾಗಿ ಜಗಳ, ಮಾತಿನ ಚಕಮಕಿ ನಡೆಯುತ್ತಿದೆ. 

ಇತ್ತೀಚಿಗೆ ರಾಜ್ಯ ಹೈಕೋರ್ಟ್ ರ್ಯಾಪಿಡೋ ಬೈಕ್, ಓಲಾ ಹಾಗೂ ಉಬ‌ರ್ ಟ್ಯಾಕ್ಸಿಗಳ ಸೇವೆಗಳನ್ನು ರದ್ದು ಮಾಡಿ ಆದೇಶಿಸಿದ್ದು, ಸರ್ಕಾರ ರ್ಯಾಪಿಡೋ ಓಲಾ, ಉಬರ್ ಟ್ಯಾಕ್ಸಿ ಸೇವೆಗಳಿಗೆ ನಿಯಮವನ್ನು ರೂಪಿಸುವುದಿಲ್ಲ ಎಂದೂ ಹೇಳಿದೆ. ಅಲ್ಲದೆ ಜೂನ್ 15ರವರೆಗೆ ಸೇವೆಗೆ ಅವಕಾಶ ನೀಡಲಾಗಿತ್ತು. ಸರ್ಕಾರವು ಸ್ಪಷ್ಟ ನಿರ್ಧಾರ ತಿಳಿಸಿದ ಬಳಿಕ ಜೂನ್ 16ರಿಂದ ರಾಪಿಡೋ ಬೈಕ್, ಉಬರ್ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸಿದೆ. ಈ ನಿಷೇಧ ಆದೇಶ ಬಳಿಕ ಸಾರ್ವಜನಿಕರು ಆಟೋ, ಬಸ್ ಇತರ ಸಾರಿಗೆ ಅವಲಂಬಿಸಬೇಕಾಯಿತು. ಕೆಲವು ಆಟೋ ಚಾಲಕರು ಇದೇ ಸಮಯವನ್ನು ದುರಪಯೋಗಿಸಲು ಮುಂದಾಗಿ ಮನ ಬಂದಂತೆ ನಿಗದಿತ ಮೊತ್ತಕ್ಕೂ ಮೂರು ಪಟ್ಟು ಹೆಚ್ಚು ಹಣ ಪಡೆಯುತ್ತಿದ್ದಾರೆ.

ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜೆಪಿ ನಗರದಿಂದ ಕೊಂಚ ದೂರದವರೆಗೆ ಹೋಗಲು ಮೀಟರ್ ಹಾಕದೇ 400 ರೂ. ಕೇಳುವ ಆಟೋ ಚಾಲಕನೊಬ್ಬನ ವಿಡಿಯೋ ವೈರಲ್ ಆಗಿದೆ. ಮೀಟರ್ ಹಾಕಿ 450 ರೂ. ಆದರೂ ಕೊಡ್ತಿನಿ ಎನ್ನುತ್ತಾರೆ ಪ್ರಯಾಣಿಕ, ಆದರೂ ಇಲ್ಲ ಬರಲ್ಲ, ನಾನು ಮೀಟರ್ ಹಾಕಲ್ಲ, ಇಷ್ಟ ಇದ್ರೆ ಬಾ..ಇಲ್ಲಾ ಬೇರೆ ಗಾಡಿ ಕೇಳು ಎಂದು ಚಾಲಕ ದುರ್ವತನೆ ಪ್ರದರ್ಶಿಸಿದ್ದಾರೆ.

ತಿಂಗಳಿಗೆ 24,000 ರೂ. ಆಟೋಗೆ ಖರ್ಚು : ಒಂದು ಕಡೆ 400 ರೂ. ಆದರೆ ಎರಡು ಕಡೆ ಸಂಚಾರಕ್ಕೆ 800 ರೂ. ಮಾಸಿಕವಾಗಿ 24000 ರೂಪಾಯಿ ಆಗುತ್ತದೆ. ಬೆಂಗಳೂರಲ್ಲಿ ನಾವು ದುಡಿಯುವುದೇ 20000 ರುಪಾಯಿ, ಅದರಲ್ಲಿ 24 ಸಾವಿರ ಆಟೋಗೆ ಖರ್ಚಾದರ ಬದುಕೆ ಹೇಗೆ ನಡೆಯುತ್ತದೆ ಎಂದು ನೆಟ್ಟಿಗರು ಆಟೋ ರಿಕ್ಷಾದವರ ನಡೆ ಖಂಡಿಸಿದ್ದಾರೆ. ಜನರು ರಾಪಿಡೋ, ಟ್ಯಾಕ್ಸಿ ಮೊರೆ ಹೊಗುತ್ತಿರುವುದಕ್ಕೆ ಮತ್ತೊಂದು ಕಾರಣ ಶೇ.90ರಷ್ಟು ಆಟೋಗಳ ಚಾಲಕರು ರೌಡಿಗಳಂತೆ ದರ್ಪ ತೋರುತ್ತಾರೆ. ಸೌಜನ್ಯಯುತವಾಗಿ ವರ್ತಿಸುವುದಿಲ್ಲ ಎಂದು ಹೇಳಿದ್ದು, ಅದೆಷ್ಟೋ ಒಳ್ಳೆಯ ಆಟೋ ಚಾಲಕರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಹೇಳಿದ್ದಾರೆ. ಈ ಕಾರಣದಿಂದ ಆಟೋದವರನ್ನು ಬ್ಯಾನ್ ಮಾಡಬೇಕು. ರಾಪಿಡೋದವರನ್ನು ನಿಷೇಧಿಸಿದಂತೆ ಇವರನ್ನು ನಿಷೇಧಿಸಬೇಕು. ಆಗಲೇ ಇವರಿಗೆ ಪ್ರಯಾಣಿಕರ ನೋವು ಎಂದು ಗೊತ್ತಾಗುತ್ತದೆ ಎಂದು ಕೆಲವು ಆಗ್ರಹಿಸಿದ್ದಾರೆ.

ವಿಧಾನಸೌಧದ ಮುಂದೆ ಧರಣಿ : ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧದ ಬದಲು ಸೂಕ್ತ ನಿಯಮಗಳನ್ನು ಜಾರಿಗೆ ತರಬೇಕು ಎಂದು ವಿಧಾನಸೌಧದ ಮುಂಭಾಗದಲ್ಲಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ರ್ಯಾಲಿಯ ಮೂಲಕ ಆಗಮಿಸಿದ್ದ ರಾಪಿಡೋ, ಊಬರ್ ಸೇರಿದಂತೆ ವಿವಿಧ ಬೈಕ್ ಟ್ಯಾಕ್ಸಿಗಳ ಚಾಲಕರು ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ : BTV ಬಿಗ್ ಇಂಪ್ಯಾಕ್ಟ್ – ವರದಿ ಪ್ರಕಟಿಸಿದ ಬೆನ್ನಲ್ಲೇ ಜೈಲು ಸೇರಿದ್ದ ಗಣಿ ಅಧಿಕಾರಿ ಕೃಷ್ಣವೇಣಿ ಸಸ್ಪೆಂಡ್!

Btv Kannada
Author: Btv Kannada

Read More