BTV ಬಿಗ್ ಇಂಪ್ಯಾಕ್ಟ್ – ವರದಿ ಪ್ರಕಟಿಸಿದ ಬೆನ್ನಲ್ಲೇ ಜೈಲು ಸೇರಿದ್ದ ಗಣಿ ಅಧಿಕಾರಿ ಕೃಷ್ಣವೇಣಿ ಸಸ್ಪೆಂಡ್!

ಮಂಗಳೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನು ಪಡೆದು ಹೊರಬಂದು ಮತ್ತೆ ಹುದ್ದೆಯಲ್ಲಿ ಮುಂದುವರೆದಿದ್ದ ದಕ್ಷಿಣ ಕನ್ನಡ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ, ಹಿರಿಯ ಭೂವಿಜ್ಞಾನಿ ಕೃಷ್ಣವೇಣಿಯನ್ನು ಸರ್ಕಾರ ಅಮಾನತುಗೊಳಿಸಿದೆ.

ಲಂಚ ಪಡೆದ ಆರೋಪದ ಮೇಲೆ 18 ದಿನ ಬಂಧನದಲ್ಲಿದ್ದ ಕೃಷ್ಣವೇಣಿ ಅವರನ್ನು ಅಮಾನತುಗೊಳಿಸದೇ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿಗೆ ಶನಿವಾರ ಪತ್ರ ಬರೆದಿದ್ದರು. ಈ ಬಗ್ಗೆ BTV ಕೂಡ ವರದಿ ಮಾಡಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಅಮಾನತು ಆದೇಶ ಹೊರಡಿಸಿದೆ.

ಮನೆ ಕಟ್ಟಲು ಕಟ್ಟಡ ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 2024ರ ಅ.28ರಂದು ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಉಳ್ಳಾಲ ತಾಲೂಕು ತಹಸೀಲ್ದಾರ್ ವರದಿ ಸಲ್ಲಿಸಿದ್ದರೂ, ಗಣಿ ಇಲಾಖೆ ಅನುಮತಿ ನೀಡಿರಲಿಲ್ಲ. ಈ ಬಗ್ಗೆ ಅರ್ಜಿದಾರರು ವಿಚಾರಿಸಲು ಮಂಗಳೂರು ಗಣಿ ಇಲಾಖೆ ಕಚೇರಿಗೆ ತೆರಳಿದಾಗ, ಉಪನಿರ್ದೇಶಕಿ ಕೃಷ್ಣವೇಣಿ ಅವರು ಸಿಬ್ಬಂದಿ ಪ್ರದೀಪ್ ಅವರನ್ನು ಕರೆಸಿ ಫೈಲ್‌ಗೆ 50 ಸಾವಿರ ರೂ. ತೆಗೆದುಕೊಳ್ಳಿ, ನಂತರ ಸಹಿ ಮಾಡೋಣ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಆ ಬಳಿಕ ಮಂಗಳೂರು ಗಣಿ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ವಿರುದ್ಧ ಮಂಗಳೂರು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2025ರ ಮೇ 28ರಂದು ಕೃಷ್ಣವೇಣಿ ಅವರು ಚಾಲಕ ಮಧು ಮೂಲಕ 50 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಉಪ ನಿರ್ದೇಶಕಿ ಜತೆಗೆ ಸಿಬ್ಬಂದಿ ಪ್ರದೀಪ್ ಮತ್ತು ಚಾಲಕ ಮಧು ಅವರನ್ನು ಬಂಧಿಸಿದ್ದರು.

ಲಂಚ ಪ್ರಕರಣದಲ್ಲಿಆರೋಪಿಗಳಾಗಿದ್ದ ಸಿಬ್ಬಂದಿ ಪ್ರದೀಪ್ ಅವರನ್ನು ಮೇ 28ರಂದೇ ಅಮಾನತುಗೊಳಿಸಲಾಗಿತ್ತು. ಚಾಲಕ ಮಧು ಹೊರಗುತ್ತಿಗೆ ನೌಕರನಾಗಿದ್ದರಿಂದ ಅಮಾನತು ಪ್ರಶ್ನೆ ಬರುವುದಿಲ್ಲ. ಕೃಷ್ಣವೇಣಿ ಅವರನ್ನು ಮೇ 28ರಿಂದಲೇ ಅನ್ವಯವಾಗುವಂತೆ ಅಮಾನತುಗೊಳಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ. ದಕ್ಷಿಣ ಕನ್ನಡ ಹಿರಿಯ ಭೂ ವಿಜ್ಞಾನಿಯಾಗಿ ಸಂದೀಪ್ ಜಿ.ಯು. ಅವರಿಗೆ ಪ್ರಭಾರ ಹೊಣೆ ವಹಿಸಲಾಗಿದೆ.

ಇದನ್ನೂ ಓದಿ : ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ ಆರೋಪ – ಪ್ರೈವೇಟ್ ಸ್ಕೂಲ್ ವಿರುದ್ಧ FIR!

Btv Kannada
Author: Btv Kannada

Read More