ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ ಆರೋಪ – ಪ್ರೈವೇಟ್ ಸ್ಕೂಲ್ ವಿರುದ್ಧ FIR!

ಬೆಂಗಳೂರು : ಕಲಿಕೆಯಲ್ಲಿ ಹಿಂದುಳಿದಿದ್ದಾರೆಂದು 10 ಮಂದಿ ವಿದ್ಯಾರ್ಥಿಯರನ್ನು ಪೋಷಕರ ಒಪ್ಪಿಗೆ ಪಡೆಯದೆ ಖಾಸಗಿ ಶಾಲೆಯ ಪ್ರಾಂಶುಪಾಲರು ಸರ್ಕಾರಿ ಶಾಲೆಗೆ ಸೇರಿಸಿದ ಆರೋಪ ಕೇಳಿ ಬಂದಿದೆ. ಮಿಲ್ಲರ್ ರಸ್ತೆಯಲ್ಲಿರುವ ಸೇಂಟ್ ಮೇರಿ ಗರ್ಲ್ಸ್ ಸ್ಕೂಲ್ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ.

ಸೇಂಟ್ ಮೇರಿ ಗರ್ಲ್ಸ್ ಸ್ಕೂಲ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ತಾಯಿ ಅರುಣಾ ಆರ್. ಎಂಬುವರು ನೀಡಿದ ದೂರಿನ ಮೇರೆಗೆ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಶಾರ್ಲೆಟ್, ಕ್ಲಾಸ್ ಟೀಚರ್​​ಗಳಾದ ಸಿಸ್ಟರ್ ಲೀನ್ಸಿ ಮತ್ತು ಜೈರಾಣಿ ಎಂಬುವರ ವಿರುದ್ಧ FIR ದಾಖಲಿಸಿಕೊಂಡು ಹೈಗ್ರೌಂಡ್ಸ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

FIR ನಲ್ಲಿ ಏನಿದೆ?: 4ನೇ ತರಗತಿಯಿಂದ 10ನೇ ತರಗತಿಯವರೆಗೆ ಸೇಂಟ್ ಮೇರಿ ಗರ್ಲ್ಸ್ ಶಾಲೆಯಲ್ಲಿ ತಮ್ಮ ಪುತ್ರಿ ವ್ಯಾಸಂಗ ಮಾಡುತ್ತಿದ್ದಾಳೆ. 2024 – 25ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗಕ್ಕಾಗಿ 18,700 ರೂ., ಹಾಗೂ 2 ಸಾವಿರ ಪರೀಕ್ಷಾ ಶುಲ್ಕ ಪಾವತಿಸಿ ಆಡ್ಮಿಷನ್ ಮಾಡಿಸಿದ್ದೆ. ಆದರೆ, ಶಾಲೆಯ ಪ್ರಾಂಶುಪಾಲರು ತಮ್ಮ ಮಗಳು ಸೇರಿದಂತೆ ಒಟ್ಟು 10 ಮಂದಿ ವಿದ್ಯಾರ್ಥಿಗಳಿಗೆ ಬೇರೆ ಉಡುಪು ಹಾಗೂ ದುಪ್ಪಟ್ಟಾ ಹಾಕಿಸಿ ಕಲರ್ ಫೋಟೋ ತೆಗೆಸಿ ಶಾಲೆಯ ಪ್ರಮಾಣಪತ್ರ (ಟಿ.ಸಿ) ಮತ್ತು ಆಧಾರ್ ಕಾರ್ಡ್ ಸಮೇತ ಪ್ರೇಜರ್ ಟೌನ್​ನಲ್ಲಿ ಕಾರ್ಪೋರೇಷನ್ ಗರ್ಲ್ಸ್ ಸರ್ಕಾರಿ ಶಾಲೆಗೆ ಸಲ್ಲಿಸಿ ಖಾಸಗಿ ವಿದ್ಯಾರ್ಥಿಗಳಾಗಿ ಆಡ್ಮಿಷನ್ ಮಾಡಿದ್ಧಾರೆ ಎಂದು ದೂರಿನಲ್ಲಿ ಅರುಣಾ ಅವರು ಆಪಾದಿಸಿದ್ದಾರೆ.

ಸರ್ಕಾರಿ ಶಾಲೆಗೆ ಸೇರಿಸಿರುವ ಬಗ್ಗೆ ಯಾವುದೇ ಮಾಹಿತಿ ನೀಡದೆಯೇ ಹಾಗೂ ಒಪ್ಪಿಗೆ ಪಡೆಯದೇ ಆಡ್ಮಿಷನ್ ಮಾಡಿಸಿದ್ದಾರೆ. ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಹಿಂದಿನ ದಿನ ಶಾಲೆ ಬಳಿ ಕರೆಯಿಸಿಕೊಂಡು ಪ್ರಾಂಶುಪಾಲರು ಹಾಲ್ ಟಿಕೆಟ್ ನೀಡಿದ್ದರು. ಪರೀಕ್ಷಾ ಫಲಿತಾಂಶ ಬಂದ ಬಳಿಕ ಅಂಕಪಟ್ಟಿಯಲ್ಲಿ ಇಂಟರ್ನಲ್ ಮಾರ್ಕ್ಸ್ ನೀಡದಿದ್ದರಿಂದ ಮಗಳು ಫೇಲಾಗಿರುವುದು ತಿಳಿದು ಬಂದಿತ್ತು. ಈ ಬಗ್ಗೆ ತಿಳಿಸಿದಾಗ ಖಾಸಗಿ ಆಭ್ಯರ್ಥಿಗಳಿಗೆ ಇಂಟನರ್ಲ್ ಮಾರ್ಕ್ಸ್ ನೀಡುವುದಿಲ್ಲ ಎಂದು ಆ ಶಾಲೆಯ ಪ್ರಾಂಶುಪಾಲರು ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಶಾಲೆಗೆ ಸೇರಿಸುವ ಬಗ್ಗೆ ಇಂಟರ್ನಲ್ ಮಾರ್ಕ್ಸ್ ನೀಡದಿರುವ ಬಗ್ಗೆ ತಿಳಿಸದೇ ಮಕ್ಕಳ ಭವಿಷ್ಯದ ಜೊತೆ ಆಟವಾಡಿದ ಶಾಲಾ ಪ್ರಾಂಶುಪಾಲರು ಸೇರಿದಂತೆ ಇನ್ನಿತರ ಶಿಕ್ಷಕಿರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಅರುಣಾ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕ ಎಂಟ್ರಿ – 3 ಪರಮಾಣು ಕೇಂದ್ರಗಳು ಉಡೀಸ್​!

Btv Kannada
Author: Btv Kannada

Read More