ಬೆಂಗಳೂರು : ಕರ್ನಾಟಕದ ಮಾಜಿ ವಿಧಾನ ಪರಿಷತ್ ಸದಸ್ಯ ದಿವಂಗತ ಕೆ.ಎಚ್.ಶ್ರೀನಿವಾಸ್ ಅವರ ಪಿಂಚಣಿ ಹಣದಲ್ಲಿ ಅವ್ಯವಹಾರ ಆರೋಪ ಕೇಳಿ ಬಂದಿದೆ. ಕೆ.ಎಚ್.ಶ್ರೀನಿವಾಸ್ ನಿಧನದ ಬಳಿಕ ಪತ್ನಿ ಶಾಲಿನಿ ಶ್ರೀನಿವಾಸ್ ಅವರಿಗೆ ಪಿಂಚಣಿ ಹಣ ಬರುತ್ತಿತ್ತು. ಆದ್ರೆ ಈ ಹಣದಲ್ಲಿ ಅವ್ಯವಹಾರ ಆಗಿರುವ ದೂರು ಬಂದ ಹಿನ್ನೆಲೆ ವಿಧಾನ ಪರಿಷತ್ ಸಚಿವಾಲಯದಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುವ ಹೆಚ್.ಎಸ್.ಶಾರದಮ್ಮ ಅವರನ್ನು ಅಮಾನತು ಮಾಡಲಾಗಿದೆ.

ಪಿಂಚಣಿ ಹಣದಲ್ಲಿ ಅವ್ಯವಹಾರದ ಬಗ್ಗೆ ಮಾಜಿ MLC ದಿವಂಗತ ಕೆ.ಎಚ್.ಶ್ರೀನಿವಾಸ್ ಅವರ ಮಗಳು ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ದೂರು ಸಲ್ಲಿಸಿದ್ದರು. ನನ್ನ ತಾಯಿ, ಮಾಜಿ MLC ಕೆ.ಎಚ್.ಶ್ರೀನಿವಾಸ್ ಅವರ ಪತ್ನಿ ಶಾಲಿನಿ ಶ್ರೀನಿವಾಸ್ ಅವರು ಆಗಸ್ಟ್ 30, 2024ರಂದು ನನ್ನ ತಂದೆ ನಿಧನರಾದಾಗಿನಿಂದ ಕುಟುಂಬ ಪಿಂಚಣಿ ಪಡೆಯುತ್ತಿದ್ದಾರೆ. ಅವರು ಜನವರಿ 2025ರಲ್ಲಿ ಆದೇಶವನ್ನು ಪಡೆದು, ಸೆಪ್ಟೆಂಬರ್ 2024ರಿಂದ ಡಿಸೆಂಬರ್ 2024ರವರೆಗಿನ ಎಲ್ಲಾ ತಿಂಗಳುಗಳ ಪಿಂಚಣಿ ಅವರ ಕೆನರಾ ಬ್ಯಾಂಕ್ ಖಾತೆಗೆ ಬರುತ್ತಿತ್ತು.
ನಾನು ನನ್ನ ತಾಯಿಗೆ ಕುಟುಂಬ ಪಿಂಚಣಿ ಪಡೆಯಲು ಸಹಾಯ ಮಾಡುತ್ತಿರುವುದರಿಂದ, ಪ್ರತಿ ತಿಂಗಳು ಒಟ್ಟು 35,000/ರೂ. ಪಿಂಚಣಿ ದೊರೆಯುತ್ತದೆ. ಆದ್ರೆ ಪರಿಷತ್ ಸಚಿವಾಲಯದಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುವ ಹೆಚ್.ಎಸ್.ಶಾರದಮ್ಮ ನನಗೆ ಹಲವು ಬಾರಿ ಕರೆ ಮಾಡಿ ಅವರು ನೀಡುವ ಫೋನ್ ನಂಬರ್ಗೆ ಸುಮಾರು 5ರಿಂದ 10ಸಾವಿರ ಕಳುಹಿಸುವಂತೆ ಒತ್ತಾಯಿಸಿದ್ದಾರೆ. ಆದರೆ ನಾನು ಅದನ್ನು ನಿರಾಕರಿಸಿದ್ದೇನೆ.
ನಂತರ ನನ್ನ ತಾಯಿಯ ಬ್ಯಾಂಕ್ ಖಾತೆಗೆ ಜನವರಿ 2025ರ ತಿಂಗಳಿಗೆ ಕೇವಲ 32.500 ರೂಪಾಯಿಗಳು ಮಾತ್ರ ಜಮಾ ಆಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಅದರ ಬಗ್ಗೆ ದೂರು ನೀಡಿದಾಗ, ಸಮಸ್ಯೆಯನ್ನು ಪರಿಹರಿಸಲಾಯಿತು. ಮತ್ತು ಮುಂದಿನ ತಿಂಗಳು 35,000 ರೂ.ಗಳೊಂದಿಗೆ, ಮತ್ತು ಜನವರಿ 2025ರಲ್ಲಿ ಅವರ ಪಿಂಚಣಿ ಮೊತ್ತದಲ್ಲಿ ಉಳಿದ 2500 ರೂಪಾಯಿಗಳನ್ನು ಸಹ ಜಮಾ ಮಾಡಲಾಯಿತು.
ಹೀಗಾಗಿ ಕುಟುಂಬ ಪಿಂಚಣಿ ವಿತರಣೆಯಲ್ಲಿ ಕೆಲವು ಅಕ್ರಮಗಳು ನಡೆದಿವೆ ಎಂದು ನಾನು ಬಲವಾಗಿ ಶಂಕಿಸುತ್ತೇನೆ ಮತ್ತು ಈ ಅನುಮಾನಾಸ್ಪದ ಚಟುವಟಿಕೆಗಳು ಮತ್ತು ತೊಂದರೆಗೊಳಿಸುವ ಬೆಳವಣಿಗೆಯನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ ಎಂದು ಸಭಾಪತಿ ಬಸವಾರಜ ಹೊರಟ್ಟಿಯವರಿಗೆ ದೂರು ಸಲ್ಲಿಸಲಾಗಿತ್ತು. ಇದೀಗ ಈ ದೂರನ್ನು ಆಧರಿಸಿ ವಿಧಾನ ಪರಿಷತ್ ಸಚಿವಾಲಯದಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುವ ಹೆಚ್.ಎಸ್.ಶಾರದಮ್ಮ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ : 18 ದಿನ ಜೈಲಲ್ಲಿದ್ರೂ ಮತ್ತೆ ಡ್ಯೂಟಿಗೆ ಗಣಿ ಅಧಿಕಾರಿ – ‘ಲೋಕಾ’ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ರೂ ಕೃಷ್ಣವೇಣಿ ಕರ್ತವ್ಯಕ್ಕೆ ಹಾಜರ್!
