18 ದಿನ ಜೈಲಲ್ಲಿದ್ರೂ ಮತ್ತೆ ಡ್ಯೂಟಿಗೆ ಗಣಿ ಅಧಿಕಾರಿ – ‘ಲೋಕಾ’ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ರೂ ಕೃಷ್ಣವೇಣಿ ಕರ್ತವ್ಯಕ್ಕೆ ಹಾಜರ್!

ಮಂಗಳೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್​​ ಆಗಿರುವ ಅಧಿಕಾರಿಗಳು ಆರೋಪ ಮುಕ್ತವಾಗುವವರೆಗೆ ಮತ್ತೆ ಸೇವೆಗೆ ಅವಕಾಶ ನೀಡಬಾರದೆಂದು ಸುಪ್ರೀಂ ಕೋರ್ಟ್ ಗುರುವಾರವಷ್ಟೇ ಆದೇಶ ನೀಡಿದೆ. ಆದರೆ ಕಡಲ ನಗರಿ ಮಂಗಳೂರಿನಲ್ಲಿ ಗಣಿ ಇಲಾಖೆ ಅಧಿಕಾರಿಯೊಬ್ಬರು 18 ದಿನ ಜೈಲಿನಲ್ಲಿದ್ದರೂ ಜಾಮೀನಿನಲ್ಲಿ ಬಿಡುಗಡೆ ಯಾಗಿ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ.

ಸುಪ್ರೀಂಕೋರ್ಟ್ ನ್ಯಾ.ಸಂದೀಪ್ ಮೆಹ್ತಾ ಮತ್ತು ನ್ಯಾ.ಪ್ರಸನ್ನ ಬಿ.ವರಾಳೆ ಅವರಿದ್ದ ನ್ಯಾಯಪೀಠ ಭ್ರಷ್ಟ ಸಾರ್ವಜನಿಕ ಅಧಿಕಾರಿಗಳನ್ನು ಮತ್ತೆ ಕೆಲಸಕ್ಕೆ ಮರಳಲು ಏಕೆ ಅವಕಾಶ ನೀಡಬೇಕು, ಇದು ಸಾರ್ವಜನಿಕ ನಂಬಿಕೆಗೆ ಹಾನಿ ಮತ್ತು ವ್ಯವಸ್ಥೆಯ ಅಡಿಪಾಯ ದುರ್ಬಲಗೊಳಿಸುತ್ತದೆ ಎಂದು ಹೇಳಿದೆ. ಆದ್ರೆ ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್​ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದರೂ ಮತ್ತೆ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಕೃಷ್ಣವೇಣಿ - ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಗಳೂರು
ಕೃಷ್ಣವೇಣಿ – ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಗಳೂರು

ಹೌದು..  ಮನೆ ಕಟ್ಟಲು ಕಟ್ಟಡ ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 2024ರ ಅ.28ರಂದು ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಉಳ್ಳಾಲ ತಾಲೂಕು ತಹಸೀಲ್ದಾರ್ ವರದಿ ಸಲ್ಲಿಸಿದ್ದರೂ, ಗಣಿ ಇಲಾಖೆ ಅನುಮತಿ ನೀಡಿರಲಿಲ್ಲ. ಈ ಬಗ್ಗೆ ಅರ್ಜಿದಾರರು ವಿಚಾರಿಸಲು ಮಂಗಳೂರು ಗಣಿ ಇಲಾಖೆ ಕಚೇರಿಗೆ ತೆರಳಿದಾಗ, ಉಪನಿರ್ದೇಶಕಿ ಕೃಷ್ಣವೇಣಿ ಅವರು ಸಿಬ್ಬಂದಿ ಪ್ರದೀಪ್ ಅವರನ್ನು ಕರೆಸಿ ಫೈಲ್‌ಗೆ 50 ಸಾವಿರ ರೂ. ತೆಗೆದುಕೊಳ್ಳಿ, ನಂತರ ಸಹಿ ಮಾಡೋಣ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಆ ಬಳಿಕ ಮಂಗಳೂರು ಗಣಿ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ವಿರುದ್ಧ ಮಂಗಳೂರು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2025ರ ಮೇ 28ರಂದು ಕೃಷ್ಣವೇಣಿ ಅವರು ಚಾಲಕ ಮಧು ಮೂಲಕ 50 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಉಪ ನಿರ್ದೇಶಕಿ ಜತೆಗೆ ಸಿಬ್ಬಂದಿ ಪ್ರದೀಪ್ ಮತ್ತು ಚಾಲಕ ಮಧು ಅವರನ್ನು ಬಂಧಿಸಿದ್ದರು.

ಹೈಕೋರ್ಟ್‌ನಲ್ಲಿ ಕೇಸ್‌ಗೆ ತಡೆ : ಕೃಷ್ಣವೇಣಿ ಅವರು ಲೋಕಾಯುಕ್ತ ಪ್ರಕರಣದ ವಿರುದ್ಧ ಹೈಕೋರ್ಟ್‌ಗೆ ದಾವೆ ಸಲ್ಲಿಸಿ ತಡೆಯಾಜ್ಞೆ ತಂದಿದ್ದು, ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ. ಆದರೆ ರಾಜ್ಯ ಸರಕಾರ ಅಧಿಕಾರಿಯನ್ನು ಅಮಾನತು ಮಾಡದೆ ಕಾರಣ ಅಧಿಕಾರಿ ಮತ್ತೆ ಅದೇ ಹುದ್ದೆಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರದ ವ್ಯವಸ್ಥೆ ನಗೆಪಾಟಲಿಗೀಡಾಗಿದೆ.

ಇದನ್ನೂ ಓದಿ : ಶತಮಾನದ ಪೊಲೀಸ್ ಕಾನ್‌ಸ್ಟೇಬಲ್‌ ‘ಟೋಪಿ’ ಬದಲಾಗಲ್ಲ – ADGP ಉಮೇಶ್ ಕುಮಾರ್ ಸಮಿತಿಯಿಂದ ಸರ್ಕಾರಕ್ಕೆ ವರದಿ!

Btv Kannada
Author: Btv Kannada

Read More