ಬೆಂಗಳೂರು : ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿರುವ RCB, ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಸುವ ವೇಳೆ ಕಾಲ್ತುಳಿತದಿಂದ 11 ಜನ ಅಮಾಯಕರು ಸಾವನಪ್ಪಿದ್ದರು. ಈ ಒಂದು ಪ್ರಕರಣದಿಂದ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಸೇರಿ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.
ಇದೀಗ ಕಾಲ್ತುಳಿತ ಪ್ರಕರಣದ ತನಿಖೆ ನಡೆಸುತ್ತಿರುವ ವಿಚಾರಣಾಧಿಕಾರಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಎದುರು ಶುಕ್ರವಾರ ಇಬ್ಬರು ಡಿಸಿಪಿಗಳು ಸೇರಿ ಆರು ಮಂದಿ ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ, ನಗರದ ಮಾಜಿ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾತ್ರ ವಿಚಾರಣೆಗೆ ಗೈರಾಗಿದ್ದಾರೆ.
ಒಟ್ಟು ಈ ಪ್ರಕರಣದಲ್ಲಿ 40ಕ್ಕೂ ಅಧಿಕ ಪೊಲೀಸರ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ಮತ್ತು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಸಾಗರ್, ಇಬ್ಬರು ಇನ್‌ಸ್ಪೆಕ್ಟರ್‌ಗಳು, ಇಬ್ಬರು ಎಸಿಪಿಗಳು ನಿನ್ನೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣಾ ತಂಡ ಸಂಜೆ 5 ಗಂಟೆವರೆಗೂ ಅಧಿಕಾರಿಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಜಗದೀಶ್ ಅವರು, ಕ್ರೀಡಾಂಗಣದ ಭದ್ರತೆಗೆ ನಿಯೋಜನೆಗೊಂಡಿದ್ದ ಹಿರಿಯ ಅಧಿಕಾರಿಗಳ ಪಟ್ಟಿ ಆಧರಿಸಿ IPS ಬಿ.ದಯಾನಂದ್ ಸೇರಿ ಸುಮಾರು 45 ಮಂದಿ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ. ಅದರಂತೆ ಹಂತ-ಹಂತವಾಗಿ ಅಧಿಕಾರಿ-ಸಿಬ್ಬಂದಿಗಳು ವಿಚಾರಣೆಗೆ ಹಾಜರಾಗುತ್ತಿದ್ದಾರೆ.
‘ಕಾಲ್ತುಳಿತಕ್ಕೆ ಕಾರಣಗಳೇನು? ಯಾವ ಗೇಟ್ ಬಳಿ ಎಷ್ಟು ಸಿಬ್ಬಂದಿ ನಿಯೋಜಿಸಲಾಗಿತ್ತು? ಕ್ರೀಡಾಂಗಣದ ಬಳಿ ಜನಸಾಗರ ಬರಲು ಕಾರಣವೇನು? ಭದ್ರತೆ ಬಗ್ಗೆ ಪೂರ್ವಾಭಾವಿ ಸಭೆ ನಡೆಸಲಾಗಿತ್ತಾ? ಎಂಬ ಪ್ರಶ್ನೆಗಳನ್ನು ಪೊಲೀಸರಿಗೆ ಕೇಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ‘ಕ್ರೀಡಾಂಗಣದ ಸುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಆದರೆ, ವಿಧಾನಸೌಧ ಕಾರ್ಯಕ್ರಮ ಮುಗಿದ ಬಳಿಕ ಆರ್‌ಸಿಬಿ ಆಟಗಾರರು ಕ್ರೀಡಾಂಗಣಕ್ಕೆ ಬರಲಿದ್ದಾರೆ ಎಂಬ ಮಾಹಿತಿ ತಿಳಿದು, ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣದತ್ತ ಬಂದರು. ಆಗ ಜನದಟ್ಟಣೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿ – ರಾಜ್ಯ ಬಿಜೆಪಿಗೆ ಅಮಿತ್ ಶಾ ಸೂಚನೆ!
