ಹಾಸನ : ಭಾರೀ ಮಳೆಯಿಂದ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಘಟನೆ ಸಕಲೇಶಪುರ ತಾಲೂಕಿನ ಯಡೆಕುಮಾರಿ ಬಳಿ ನಡೆದಿದೆ. ಕಿಲೋಮೀಟರ್ ಸಂಖ್ಯೆ 74 &75ರ ನಡುವಿನ ಅರೆಬೆಟ್ಟ ಮತ್ತು ಯಡೆಕುಮಾರಿ ಮಧ್ಯೆ ಭಾಗದಲ್ಲಿ ರೈಲ್ವೆ ಹಳಿ ಮೇಲೆ ಭೂಕುಸಿತವಾಗಿದೆ.

ಭಾರೀ ಗಾತ್ರದ ಬಂಡೆ ಉರುಳಿ ಬಿದ್ದಿದ್ದು, ಹಳಿಗೆ ಹಾನಿಯಾಗಿದೆ. ಇದರಿಂದಾಗಿ ಬೆಂಗಳೂರು-ಕಣ್ಣೂರು ಘಾಟ್, ಬೆಂಗಳೂರು-ಮುರುಡೇಶ್ವರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಬಂಡೆ ಬಿದ್ದಿರುವ ಸ್ಥಳದಿಂದ ಸ್ವಲ್ಪ ದೂರಕ್ಕೆ ಬಂದು ನಿಂತಿದ್ದು, ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ರೈಲು ಸ್ಥಗಿತಗೊಂಡಿದ್ದರಿಂದ ನೂರಾರು ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದು, ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೆ ಕಾಫಿ, ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಬೇರೆ ವಾಹನದಲ್ಲಿ ತೆರಳುತ್ತಿದ್ದಾರೆ.
ಇದನ್ನೂ ಓದಿ : ಇಂದು ವಿಶ್ವ ಯೋಗ ದಿನಾಚರಣೆ – ವಿಶಾಖಪಟ್ಟಣಂನ ಕಡಲ ತೀರದಲ್ಲಿ 3 ಲಕ್ಷ ಜನರೊಂದಿಗೆ ಪ್ರಧಾನಿ ಮೋದಿ ಯೋಗಾಭ್ಯಾಸ!







