ಪ್ರಯಾಣಿಕರೇ ಗಮನಿಸಿ – ಭಾನುವಾರ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ!

ಬೆಂಗಳೂರು : ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಉದ್ಯೋಗಿಗಳು ಸೇರಿದಂತೆ ಲಕ್ಷಾಂತರ ಜನರ ಸುಖಕರ ಪ್ರಯಾಣಕ್ಕೆ ಅನುಕೂಲವಾಗಿದೆ. ಬೆಂಗಳೂರಿನ ಟ್ರಾಫಿಕ್​ನಿಂದ ತಪ್ಪಿಸಿಕೊಂಡು ಕೆಲವೇ ಸಮಯದಲ್ಲಿ ನಾವು ಅಂದುಕೊಂಡ ಸ್ಥಳ ತಲುಪುವ ಮೆಟ್ರೋ, ನಗರ ವಾಸಿಗಳ ಜೀವನಾಡಿ ಆಗಿದೆ. ಇದೀಗ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ನೇರಳೆ ಮಾರ್ಗ (Purple Line)ದಲ್ಲಿ ಭಾನುವಾರ ಅಂದರೆ ಜೂನ್​ 22ರಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​​ಸಿಎಲ್)ವು ಇದೇ ಜೂನ್ 22 ರಂದು ಭಾನುವಾರ ನೇರಳೆ ಮಾರ್ಗದ ಹಲಸೂರು ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ನಿಗದಿತ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿದೆ. ಹೀಗಾಗಿ ಅಂದು ಬೆಳಗ್ಗೆ 7 ಗಂಟೆಯಿದ 9 ಗಂಟೆವರೆಗೆ ಎಂ.ಜಿ ರಸ್ತೆ- ಬೈಯ್ಯಪ್ಪನಹಳ್ಳಿ ಮಾರ್ಗದ ಮಧ್ಯೆ ತಾತ್ಕಾಲಿಕವಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಲಿದೆ.

ಇದೇ ನೇರಳೆ ಮಾರ್ಗದ ಇತರೆ ಮಾರ್ಗಗಳಾದ ಚಲ್ಲಘಟ್ಟದಿಂದ ಎಂ.ಜಿ ರಸ್ತೆ ಮತ್ತು ಬೈಯ್ಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್​ (ಕಾಡುಗೋಡಿ) ಬೆಳಗ್ಗೆ 7 ಗಂಟೆಯಿಂದ ನಿಗದಿಯಂತೆ ಕಾರ್ಯನಿರ್ವಹಿಸಲಿದೆ. ಹಾಗೂ ಹಸಿರು ಮಾರ್ಗದ ರೇಷ್ಮೆ ಸಂಸ್ಥೆ ಮತ್ತು ಮಾದಾವರ ನಡುವೆ ಮೆಟ್ರೋ ಸೇವೆಗಳು ಬೆಳಗ್ಗೆ 7 ಗಂಟೆಯಿಂದ ಎಂದಿನಂತೆ ಕಾರ್ಯನಿರ್ವಸಲಿದೆ. ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪೂರ್ವ ತಯಾರಿಗೆ ಯೋಜಿಸಿಕೊಳ್ಳುವಂತೆ ವಿನಂತಿಸಲಾಗಿದೆ. ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ತೊಂದರೆ ಆಗುತ್ತಿರುವುದಕ್ಕೆ ಬಿಎಂಆರ್​​ಸಿಎಲ್ ವಿಷಾದ ವ್ಯಕ್ತಪಡಿಸಿದೆ.

ಇದನ್ನೂ ಓದಿ : ಬಿಜೆಪಿ ಭಿನ್ನರ ಸಭೆಯಲ್ಲಿ ಭಾಗಿಯಾಗಿ ಇಕ್ಕಟ್ಟಿಗೆ ಸಿಲುಕಿದ ಸೋಮಣ್ಣ!

Btv Kannada
Author: Btv Kannada

Read More