ಅಣ್ಣನ ಬೈಕ್​ಗೆ ಹೊಸ ರೂಪ ಕೊಟ್ಟ ತಮ್ಮ – ಚಿರು ಸರ್ಜಾ ಫೇವರೆಟ್ ಗಾಡಿ ಓಡಿಸಿ ಖುಷಿಪಟ್ಟ ಧ್ರುವ ಸರ್ಜಾ!

ಸ್ಯಾಂಡಲ್​ವುಡ್​​ನ​ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸದ್ಯ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಗ್ಯಾರೇಜ್​ನಲ್ಲಿಯೇ ನಿಂತಿದ್ದ ಪ್ರೀತಿಯ ಅಣ್ಣ ಚಿರು ಸರ್ಜಾ ಅವರ ಬೈಕ್​ಗೆ ಧ್ರುವ ಹೊಸ ರೂಪ ಕೊಟ್ಟಿದ್ದಾರೆ.

ಹೌದು.. ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಇಬ್ಬರ ನಡುವಿನ ಬಾಂಧವ್ಯ ಅಭಿಮಾನಿಗಳಿಗೆ ಗೊತ್ತೇ ಇದೆ. ರಕ್ತ ಸಂಬಂಧದಲ್ಲಿ ಅಣ್ಣ ತಮ್ಮಂದಿರಂತೆ ಇದ್ದರೂ,  ಜೀವನದಲ್ಲಿ ಸ್ನೇಹಿತರಂತೆ ಇದ್ದರು. ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಂತಿದ್ದರು. ಆದ್ರೆ ಚಿರಂಜೀವಿ ಸರ್ಜಾ ಅವರು ಅಕಾಲಿಕವಾಗಿ ನಿಧನರಾದರು. ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿತ್ತು.

ಅಣ್ಣ ಚಿರು ಅಗಲಿದಾಗ ತಮ್ಮ ಧ್ರುವ ತುಂಬಾ ಅತ್ತಿದ್ದು ಮಾತ್ರವಲ್ಲ, ಅಣ್ಣನ ನೆನಪಲ್ಲೇ ತುಂಬಾ ಕೊರಗಿದ್ದರು. ಆ ಬಳಿಕ ಸಹಜ ಎಂಬಂತೆ, ಅಣ್ಣನ ಸವಿನೆನಪಿನೊಂದಿಗೆ ತಮ್ಮ ಬದುಕು ಕಳೆಯುತ್ತಿದ್ದಾರೆ.

ಇದೀಗ ಅಣ್ಣ ಚಿರಂಜೀವಿ ನೆನಪು ಮಾಡಿಕೊಂಡು ಒಂದು ಅಪೂರ್ವವಾದ ಕೆಲಸ ಮಾಡಿದ್ದಾರೆ. ಹಲವು ವರ್ಷಗಳಿಂದ ಗ್ಯಾರೇಜ್ ನಲ್ಲಿ ನಿಂತಿದ್ದ ಅಣ್ಣನ ಫೇವರೆಟ್ ಗಾಡಿಯನ್ನು ಮತ್ತೆ ಧ್ರುವ ಸರ್ಜಾ ರೆಡಿ ಮಾಡಿಸಿದ್ದಾರೆ. ಅಣ್ಣನ ಫೇವರೆಟ್ ಗಾಡಿ ನೋಡಿ ಮತ್ತೆ ಧ್ರುವ ಸರ್ಜಾ ಭಾವುಕರಾಗಿದ್ದಾರೆ. ಅದನ್ನು ಮತ್ತೆ ಓಡಿಸಿ, ಅಣ್ಣನ ನೆನಪನ್ನು ಮತ್ತೆಮತ್ತೆ ಮಾಡಿಕೊಳ್ಳುವ ಬಯಕೆಯಿಂದ ಮೂಲೆ ಸೇರಿದ್ದ ಗಾಡಿಯನ್ನು ರಿಪೇರಿ ಮಾಡಿಸಿ ಅಣ್ಣನ ಗಾಡಿ ಓಡಿಸಿ ಧ್ರುವ ಸರ್ಜಾ ಖುಷಿ ಪಟ್ಟಿದ್ದಾರೆ.

ಸದ್ಯ ಧ್ರುವ ಸರ್ಜಾ ಯಮಹ ಬೈಕ್ ಓಡಿಸಿದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೇ ವಿಡಿಯೋ ನೋಡಿದ ಚಿರು ಸರ್ಜಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಇದನ್ನೂ ಓದಿ : 45 ವರ್ಷಗಳ ಬಳಿಕ ದಾಖಲೆಗೆ ಸಜ್ಜಾದ KRS ಡ್ಯಾಂ – ಭರ್ತಿಯಾಗಲು ಕೇವಲ 7 ಅಡಿ ಅಷ್ಟೇ ಬಾಕಿ!

Btv Kannada
Author: Btv Kannada

Read More