ಮಂಡ್ಯ : ಕಳೆದ ಕೆಲ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಆಗ್ತಿದೆ. ಇದರಿಂದ ಕೆಆರ್‌ಎಸ್ ಜಲಾಶಯಕ್ಕೆ ಅಧಿಕ ನೀರು ಹರಿದು ಬರ್ತಿದ್ದು, ಕೆಆರ್‌ಎಸ್ ಭರ್ತಿಯ ಅಂಚಿಗೆ ತಲುಪಿದೆ. ಡ್ಯಾಂ ಭರ್ತಿಗೆ ಇನ್ನು ಕೇವಲ 7 ಅಡಿ ಬಾಕಿಯಿದ್ದು, 45 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದೆ.

ಹೌದು.. ಜೀವನದಿ ಕಾವೇರಿ ಉಕ್ಕಿ ಹರಿಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಆಗ್ತಿರುವ ಹಿನ್ನೆಲೆ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯತ್ತ ಸಾಗಿದೆ. ಆದ್ರೆ, ಪ್ರತಿವರ್ಷ ಕೆಆರ್‌ಎಸ್ ಡ್ಯಾಂ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಭರ್ತಿಯಾಗ್ತಿತ್ತು. ಅಪರೂಪಕ್ಕೊಮ್ಮೆ ಜುಲೈ ತಿಂಗಳಿನಲ್ಲಿ ಭರ್ತಿಯಾಗಿರುವ ಒಂದೆರಡು ಉದಾಹರಣೆ ಇದೆ. ಆದರೆ ಈ ಬಾರಿ ಜೂನ್ ತಿಂಗಳಿನಲ್ಲಿ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ KRS ಡ್ಯಾಂ 117 ಅಡಿ ಭರ್ತಿಯಾಗಿದ್ದು, ಸಂಪೂರ್ಣ ಭರ್ತಿಗೆ ಇನ್ನು ಕೇವಲ 7 ಅಡಿಗಳಷ್ಟು ನೀರು ತುಂಬಬೇಕಿದೆ. ಹೀಗೆ ಮಳೆ ಬಿದ್ದರೆ ಇನ್ನು ಕೆಲ ದಿನಗಳಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗಲಿದೆ. 1980ರಿಂದ ಇಲ್ಲಿಯವರೆಗೆ ಜೂನ್ ತಿಂಗಳಿನಲ್ಲಿ KRS ಡ್ಯಾಂ ಭರ್ತಿಯಾಗಿರುವ ಉದಾಹರಣೆಯೇ ಇಲ್ಲ. ಇದೇ ತಿಂಗಳು ಕೆಆರ್‌ಎಸ್ ಡ್ಯಾಂ ಭರ್ತಿಯಾದರೆ ದಾಖಲೆಯ ಪುಟಕ್ಕೆ ಕೃಷ್ಣರಾಜ ಸಾಗರ ಜಲಾಶಯ ಸೇರ್ಪಡೆಯಾಗಲಿದೆ.

ಇನ್ನು ಡ್ಯಾಂ ಕೆಳಗಿನ ಕಾವೇರಿ ನದಿ ಪಾತ್ರದ ಜನರಿಗೆ ಇದೀಗ ಪ್ರವಾಹ ಆತಂಕ ಶುರುವಾಗಿದೆ. ಡ್ಯಾಂನಿಂದ ನದಿಗೆ ಯಾವುದೇ ಕ್ಷಣದಲ್ಲಿ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಕಾವೇರಿ ನೀರಾವರಿ ನಿಗಮ ಹಾಗೂ ಮಂಡ್ಯ ಜಿಲ್ಲಾಡಳಿತ ಪ್ರವಾಹದ ಎಚ್ಚರಿಕೆ ನೀಡಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಬಳಿಗೆ ಜನ ಜಾನುವಾರುಗಳು ತೆರಳದಂತೆ ಎಚ್ಚರಿಕೆ ನೀಡಲಾಗಿದ್ದು, ಕಾವೇರಿ ನದಿಯ ನಡುಗಡ್ಡೆಯಲ್ಲಿನ ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ ಗೆ ಕ್ಷೇತ್ರ ತೊರೆಯುವಂತೆ ತಹಶಿಲ್ದಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ : 30 ವರ್ಷ ಹಿಂದೆ 500 ರೂ. ಲಂಚ ಪಡೆದಿದ್ದ ಕೇಸ್ – ನಿವೃತ್ತಿಯಾದ 10 ವರ್ಷದ ಬಳಿಕ ಗ್ರಾಮಲೆಕ್ಕಾಧಿಕಾರಿ ಜೈಲು ಪಾಲು!







