30 ವರ್ಷ ಹಿಂದೆ 500 ರೂ. ಲಂಚ ಪಡೆದಿದ್ದ ಕೇಸ್​ – ನಿವೃತ್ತಿಯಾದ 10 ವರ್ಷದ ಬಳಿಕ ಗ್ರಾಮಲೆಕ್ಕಾಧಿಕಾರಿ ಜೈಲು ಪಾಲು!

ಬೆಳಗಾವಿ : 30 ವರ್ಷದ ಹಿಂದೆ ಪಡೆದಿದ್ದ 500 ರೂ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತಿಯಾದ 10 ವರ್ಷದ ಬಳಿಕ ಗ್ರಾಮ ಲೆಕ್ಕಾಧಿಕಾರಿ ಜೈಲು ಪಾಲಾಗಿರುವ ವಿಚಿತ್ರ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ನಾಗೇಶ ಶಿವಂಗೇಕರ್ ಜೈಲು ಪಾಲಾದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ. ಇದೇ ಪ್ರಕರಣದಲ್ಲಿ ಇನ್ನೊಂದು ವಿಚಿತ್ರವೆಂದರೆ ದೂರುದಾರ ಕೂಡ ಮೃತಪಟ್ಟು ಐದು ವರ್ಷವಾಗಿದೆ.

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಲಕ್ಷ್ಮಣ ಕಟಾಂಬಳೆ ಅನ್ನೋರ ಬಳಿ 500 ರೂಪಾಯಿ ಲಂಚ ಸ್ವೀಕಾರ ಪ್ರಕರಣ ಇದಾಗಿದೆ. ಪಹಣಿ ಪತ್ರದಲ್ಲಿ ವಾಟ್ನಿ ಮಾಡಿ ಉತಾರ ಕೊಡಲು 500 ರೂಪಾಯಿ ಲಂಚ ನೀಡುವಂತೆ ನಾಗೇಶ ಶಿವಂಗೇಕರ್ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಕಟಾಂಬಳೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 500 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಅಧಿಕಾರಿಗಳು ದಾಳಿ ಮಾಡಿ ಟ್ರ್ಯಾಪ್ ಮಾಡಿದ್ದರು.

2006ರಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಒಂದು ವರ್ಷ ಜೈಲು ಮತ್ತು 1 ಸಾವಿರ ರೂ ದಂಡ ವಿಧಿಸಲಾಗಿತ್ತು. ಬಳಿಕ ಧಾರವಾಡ ಹೈಕೋರ್ಟ್ ‌ಮೋರೆ ಹೋಗಿದ್ದ ನಾಗೇಶ್ ಶಿವಂಗೇಕರ್​ಗೆ ರಿಲೀಫ್ ಸಿಕ್ಕಿತ್ತು. ಆದರೆ ಹೈಕೋರ್ಟ್ ‌ಆದೇಶ ಪ್ರಶ್ನಿಸಿ ಲೋಕಾಯುಕ್ತ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

ಇಂದು ಸುಪ್ರೀಂ ಕೋರ್ಟ್​ದಿಂದ ಲೋಕಾಯುಕ್ತ ಪರ ತೀರ್ಪು ಪ್ರಕಟವಾಗಿದ್ದು, ಕೆಲಸದಿಂದ ನಿವೃತ್ತಯಾಗಿ 10 ವರ್ಷದ ಬಳಿಕ ಆರೋಪಿ ಮತ್ತೆ ಜೈಲು ಪಾಲಾಗಿದ್ದಾರೆ. ಸದ್ಯ ಬೆಳಗಾವಿ ಹಿಂಡಲಗಾ ಜೈಲಿಗೆ ನಾಗೇಶ್ ಶಿವಂಗೇಕರ್​​ನ್ನು ಲೋಕಾಯುಕ್ತ ಪೊಲೀಸರು ರವಾನಿಸಿದ್ದಾರೆ.

ಇದನ್ನೂ ಓದಿ : ಪೊಲೀಸರ ಬಗ್ಗೆ ಫೇಸ್​​ಬುಕ್​ನಲ್ಲಿ ನೇರ ಪ್ರಸಾರ ಮಾಡಿದರೆ ಕ್ರಿಮಿನಲ್ ಅಪರಾಧವಾಗುವುದಿಲ್ಲ – ಹೈಕೋರ್ಟ್​!

Btv Kannada
Author: Btv Kannada

Read More