ಕಲಬುರಗಿ : ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಲ್ಲಿ ಹಣ ನೀಡಿದವರಿಗಷ್ಟೇ ಮನೆ ಹಂಚಿಕೆ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ತಾಲೂಕಿನ ಕೈ ಪಕ್ಷದ ಹಿರಿಯ ಶಾಸಕ ಬಿ.ಆರ್ ಪಾಟೀಲ್ ಹಾಗೂ ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಮಧ್ಯೆ ನಡೆದಿರುವ ಸ್ಫೋಟಕ ಆಡಿಯೋ ಸಂಭಾಷಣೆ ಇದೀಗ ವೈರಲ್ ಆಗಿದೆ.

ಈ ಆಡಿಯೋ ಮೂಲಕ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಹಗರಣ ಬಟಾಬಯಲಾಗಿದೆ. ರಾಜಕಾರಣಿಗಳು ಬಡವರನ್ನೂ ಬಿಡದೇ ಹಣ ಪೀಕುತ್ತಿದ್ದು, ಕೇಳಿದ್ದಷ್ಟು ಹಣ ಕೊಟ್ಟರಷ್ಟೇ ಬಡವರಿಗೆ ಮನೆ ಮಂಜೂರು ಭಾಗ್ಯ ಸಿಗಲಿದೆ.

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಶಾಸಕ ಬಿ.ಆರ್.ಪಾಟೀಲ್ ಅವರು, ತಮ್ಮಲ್ಲಿರುವ ಭ್ರಷ್ಟಾಚಾರದ ಮಾಹಿತಿಯನ್ನು ಬಹಿರಂಗ ಪಡಿಸಿದರೆ ಇಡೀ ಸರ್ಕಾರವೇ ಅಲ್ಲಾಡುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ನಮ್ಮ ಸರ್ಕಾರವನ್ನೆ ದೂರಲು ನನಗೆ ಬೇಸರವಾಗ್ತಿದೆ ಎಂದು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಶಿಫಾರಸ್ಸು ಪತ್ರಗಳಿಗೆ ಬೆಲೆಯನ್ನೇ ನೀಡಿಲ್ಲ. ಗ್ರಾಮ ಪಂಚಾಯತಿ ಅಧ್ಯಕ್ಷರ ಕೊಟ್ಟ ವಸತಿ ನಿಲಯದ ಶಿಫಾರಸ್ಸು ಪತ್ರಕ್ಕೂ ಬೆಲೆ ಇಲ್ಲ ಎಂದು ಬಿ.ಆರ್ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಹಾಗೂ ಕೈ ಶಾಸಕ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ಆಗುತ್ತಿದ್ದು, ಸರ್ಕಾರದ ವಿರುದ್ಧ ಪ್ರಹಾರಕ್ಕೆ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಇದನ್ನೂ ಓದಿ : ಆದಿಚುಂಚನಗಿರಿ ಮಠದ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ – ಬಿಜಿಎಸ್ ಕಾಲೇಜ್ನಲ್ಲಿ ಬಾಂಬ್ ಸ್ಕ್ವಾಡ್ ಸೇರಿ ಬಿಗಿ ಭದ್ರತೆ!
