ಬೆಂಗಳೂರು : ಚಿಂತಕ ಚಕ್ರವರ್ತಿ ಸೂಲಿಬೆಲೆ ದ್ವೇಷ ಭಾಷಣ ಮಾಡಿ ಹಿಂದೂ ಮುಸ್ಲಿಂರ ನಡುವಿನ ಸೌಹಾರ್ಧತೆಯನ್ನು ಕೆಡಿಸಿರುವ ಕುರಿತು ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಹಲವು ಕ್ರಿಮಿನಲ್ ಕೇಸ್ಗಳು ಕೂಡ ದಾಖಲಾಗಿದೆ. ಹಾಗಾಗಿ ಕುಂದಾಪುರದಲ್ಲಿ ಜೂ. 20 ರಿಂದ 22ರವರೆಗೆ ಆಯೋಜಿಸಲಾಗಿರುವ ಚಕ್ರವರ್ತಿ ಸೂಲಿಬೆಲೆ ಅವರ ಉಪನ್ಯಾಸ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆ ನೋಟಿಸ್ ನೀಡಿದೆ.
ಪೊಲೀಸರು ನೋಟೀಸ್ನಲ್ಲಿ ಕೆಲವೊಂದು ಅಂಶಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಅದರಲ್ಲಿ ಉಪನ್ಯಾಸ ನೀಡುವಾಗ “ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ” ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಅದರ ವ್ಯಾಪ್ತಿಯಲ್ಲಿ ಮಾತ್ರ ಉಪನ್ಯಾಸ ನೀಡುವುದು ಹೊರತು ಬೇರೆ ರಾಜಕೀಯ ವಿಚಾರವಾಗಿ ಅಥವಾ ರಾಜಕೀಯ ನಾಯಕರ ತೇಜೋವಧೆ ಮಾಡದಂತೆ ನಿಗಾವಹಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ, ಇವರು ಮತ್ತೆ ವರಾತ ಶುರು ಮಾಡಿದರು. ನಾನು ಕುಂದಾಪುರಕ್ಕೆ ಹೋಗಬಾರದಂತೆ, ಅಲ್ಲಿನ ಜನರೊಡನೆ ಮಾತನಾಡಬಾರದಂತೆ. ಇದೊಂದು ಅಘೋಷಿತ ಗಡಿಪಾರು ಮಾಡಿಸುವ ಪ್ರಯತ್ನ. ಅವರ ಮಾತು ಕೇಳಿ ಪೊಲೀಸರೊಂದು ನೋಟೀಸು ಬೇರೆ ಜಾರಿ ಮಾಡಿದ್ದಾರೆ. ನನಗೇನು ಅದು ಹೊಸತಲ್ಲ. ಉದ್ರೇಕಿಸುವ ಭಾಷಣ ಮಾಡಬಾರದೆಂದು ಬಹಳ ಕಡೆಗಳಲ್ಲಿ ಕೊಟ್ಟಿದ್ದಾರೆ. ಆದರೆ ಈ ಬಾರಿ ರಾಜಕೀಯ ಮಾತನಾಡಬಾರದು ಮತ್ತು ಯಾವುದೇ ನಾಯಕರ ತೇಜೋವಧೆ ಮಾಡಬಾರದೆಂದು ಸೇರಿಸಿದ್ದಾರೆ. ಅದರರ್ಥ ನೆಹರೂ, ಇಂದಿರಾ, ರಾಜೀವ್, ಇವರ ಕುರಿತಂತೆ ಮಾತನಾಡಬಾರದು ಎಂತಲೋ ಘಜ್ನಿ, ಘೋರಿ, ಔರಂಗಜೇಬರಂತಹ ಕ್ರೂರಿಗಳ ತೇಜೋವಧೆ ಮಾಡಬಾರದೆಂತಲೋ! ನನಗಂತೂ ಗೊತ್ತಾಗಿಲ್ಲ. ರಾಜಕೀಯ ಮಾತನಾಡಬಾರದೆನ್ನುವುದು ಕರ್ನಾಟಕದಲ್ಲಿ ಎಂದಿನಿಂದ ಜಾರಿಯಾಯ್ತು ಎನ್ನುವುದರ ಬಗ್ಗೆ ಕೂಡ ಕುಂದಾಪುರದ ಪೊಲೀಸರು ಮಾಹಿತಿ ಕೊಟ್ಟರೆ ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : ಕಾರಿನ ಟೈರ್ ಬ್ಲಾಸ್ಟ್ ಆಗಿ ಭೀಕರ ಅಪಘಾತ – ಇಬ್ಬರಿಗೆ ಗಂಭೀರ ಗಾಯ!
