ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಕಥಾಹಂದರ ನಮ್ಮ ‘X&Y’ ಸಿನಿಮಾದಲ್ಲಿದೆ – ಡೈರೆಕ್ಟರ್​​ ಸತ್ಯಪ್ರಕಾಶ್!

“ರಾಮಾ ರಾಮಾ ರೇ” ಖ್ಯಾತಿಯ ನಿರ್ದೇಶಕ ಡಿ.ಸತ್ಯಪ್ರಕಾಶ್ “ಒಂದಲ್ಲಾ ಎರಡಲ್ಲಾ” ಮತ್ತು “ಮ್ಯಾನ್ ಆಫ್ ದಿ ಮ್ಯಾಚ್ ” ಚಿತ್ರಗಳ ಮೂಲಕ ಜನಪ್ರಿಯರಾದವರು. ಪ್ರಸ್ತುತ ಡಿ.ಸತ್ಯಪ್ರಕಾಶ್ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿರುವ ಬಹು ನಿರೀಕ್ಷಿತ ಚಿತ್ರ “X&Y”. ಇತ್ತೀಚೆಗೆ ಈ ಚಿತ್ರದ ಹಾಡು ಬಿಡುಗಡೆ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಸತ್ಯಪ್ರಕಾಶ್, ವಿಭಿನ್ನ ಕಥಾಹಂದರ ಹೊಂದಿರುವ ” X&Y”, ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಚಿತ್ರದ ಮತ್ತೊಂದು ವಿಶೇಷವೆಂದರೆ ನಾನು ಈ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖಪಾತ್ರದಲ್ಲಿ ನಟಿಸಿದ್ದೇನೆ. ನಾನು ಚೆನ್ನಾಗಿ ನಟಿಸಿದ್ದೇನೆ ಎಂದರೆ ಅದಕ್ಕೆ ಕಾರಣ ಈ ಚಿತ್ರದಲ್ಲಿ ನಟಿಸಿರುವ ಅನುಭವಿ ಕಲಾವಿದರು. ಅವರನೆಲ್ಲಾ ನೋಡಿ ನಾನು ಅಭಿನಯ ಕಲಿತ್ತಿದ್ದೇನೆ. ಇನ್ನೂ ಕೌಶಿಕ್ ಹರ್ಷ ಸಂಗೀತ ನೀಡಿರುವ ಹಾಡುಗಳಂತೂ ಒಂದಕ್ಕಿಂತ ಒಂದು ಮಧುರವಾಗಿದೆ. ಲವಿತ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ ನಮ್ಮ‌ ಚಿತ್ರದ ಹೈಲೆಟ್. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ನಾನೇ ಬರೆದಿದ್ದೇನೆ.‌

ಎಲ್ಲಾ ವೈದ್ಯಕೀಯ ಸೌಲಭ್ಯಗಳಿರುವ “ಆಂಬೋ ಆಟೋ” ಸಹ ಈ ಚಿತ್ರದ ಮಖ್ಯ ಪಾತ್ರಧಾರಿ. ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನೋಡಲು ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ನಮ್ಮ “X&Y” ಚಿತ್ರ ಈ ಮಾತನ್ನು ದೂರ ಮಾಡಲಿದೆ. ಅಂತಹ ಕಥಾಹಂದರ ನಮ್ಮ ಚಿತ್ರ ಹೊಂದಿದೆ. ಜೂನ್ 26ರ ಗುರುವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ತಿಳಿಸಿದರು‌. ಅತಿಥಿಗಳಾಗಿ ಆಗಮಿಸಿದ್ದ ವಿ.ಮನೋಹರ್ ಅವರಿಗೆ ಹಾಗೂ ಚಿತ್ರತಂಡಕ್ಕೆ ಡಿ.ಸತ್ಯಪ್ರಕಾಶ್ ಧನ್ಯವಾದ ಹೇಳಿದರು.

ನಟಿ ಬೃಂದಾ ಆಚಾರ್ಯ ಮಾತನಾಡಿ, ಇಂತಹ ಲವಲವಿಕೆಯಿಂದ ಕೂಡಿರುವ ತಂಡದ ಜೊತೆಗೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ಕಥೆ ಕೇಳಿದ ತಕ್ಷಣ ಇಷ್ಟವಾಯಿತು. ಕೃಪ ನನ್ನ ಪಾತ್ರದ ಹೆಸರು ಎಂದರು.

ಇನ್ನು ಹಾಡುಗಳು ಹಾಗೂ ಹಾಡಿದವರ ಬಗ್ಗೆ ಸಂಗೀತ ನಿರ್ದೇಶಕ ಹರ್ಷ ಕೌಶಿಕ್ ಮಾಹಿತಿ ನೀಡಿದ್ದು, ಚಿತ್ರದಲ್ಲಿ ನಟಿಸಿರುವ ಧರ್ಮಣ್ಣ, ಸುಂದರ್, ಅಥರ್ವ ಪ್ರಕಾಶ್, ಹರಿಣಿ, ಆಯನಾ ಮುಂತಾದವರು ಬಣ್ಣಹಚ್ಚಿದ್ದಾರೆ. ಛಾಯಾಗ್ರಾಹಕ ಲವಿತ್, ಸಂಕಲನಕಾರ ಬಿ.ಎಸ್.ಕೆಂಪರಾಜ್ ಮುಂತಾದ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಬೆಂಗಳೂರನ್ನೇ ಬೆಚ್ಚಿಬೀಳಿಸುವ ಸುದ್ದಿ – ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ ಅಸ್ಥಿಪಂಜರ ಪತ್ತೆ!

Btv Kannada
Author: Btv Kannada

Read More