‘ಆಪರೇಷನ್ ಸಿಂಧು’ ಯಶಸ್ವಿ ಕಾರ್ಯಾಚರಣೆ – ಸಂಘರ್ಷ ಪೀಡಿತ ಇರಾನ್‌ನಿಂದ ಭಾರತಕ್ಕೆ ಮರಳಿದ 110 ವಿದ್ಯಾರ್ಥಿಗಳು!

ನವದೆಹಲಿ : ಇಸ್ರೇಲ್-ಇರಾನ್‌ ಸಂಘರ್ಷ ಕೊನೆಗೊಳ್ಳುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಉಭಯ ದೇಶಗಳು ಪರಸ್ಪರರನ್ನು ಸಂಪೂರ್ಣವಾಗಿ ನಾಶ ಮಾಡುವ ಘೋಷಣೆಗಳನ್ನು ಮೊಳಗಿಸುತ್ತಿದ್ದು, ಮಧ್ಯಪ್ರಾಚ್ಯ ಅಕ್ಷರಶಃ ಆತಂಕದಲ್ಲಿ ದಿನ ದೂಡುತ್ತಿದೆ.

ಈ ಮಧ್ಯೆ ಇರಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಜ್ಜಾಗಿದ್ದು, “ಆಪರೇಷನ್‌ ಸಿಂಧು” ಹೆಸರಿನ ಕಾರ್ಯಾಚರಣೆಯನ್ನು ಆರಂಭಿಸಿದೆ.

ಅದರಂತೆ “ಆಪರೇಷನ್‌ ಸಿಂಧು” ಕಾರ್ಯಾಚರಣೆಯ ಮೊದಲ ಭಾಗದಲ್ಲಿ, ಉತ್ತರ ಇರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳನ್ನು ವಿಶೇಷ ಇಂಡಿಗೋ ವಿಮಾನದಲ್ಲಿ  ಕರೆತರಲಾಗಿದೆ. ಇರಾನ್​ನ ಅರ್ಮೇನಿಯಾದ ಯೆರೆವಾನ್​ ಏರ್​ಪೋರ್ಟ್​ನಿಂದ ಹೊರಟ 110 ಭಾರತೀಯ ವಿದ್ಯಾರ್ಥಿಗಳ ಗುಂಪು, ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

110 ವಿದ್ಯಾರ್ಥಿಗಳ ಪೈಕಿ 90 ವಿದ್ಯಾರ್ಥಿಗಳು ಜಮ್ಮು ಮತ್ತು ಕಾಶ್ಮೀರ ಮೂಲದವರಾಗಿದ್ದು, ಎಲ್ಲರೂ ಸುರಕ್ಷಿತವಾಗಿ ತಮ್ಮ ಮನೆಗಳನ್ನು ತಲುಪಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಇನ್ನು ಇರಾನ್‌ನಲ್ಲಿರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವವರೆಗೆ ವಿರಮಿಸುವುದಿಲ್ಲ ಎಂದು ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಎಲ್ಲಾ ಭಾರತೀಯರ ರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ಭರವಸೆ ನೀಡಿದೆ. ಸ್ಥಳಾಂತರ ಪ್ರಕ್ರಿಯೆಗೆ ಅನುಕೂಲ ಮಾಡಿಕೊಟ್ಟ ಇರಾನ್​ ಮತ್ತು ಅರ್ಮೇನಿಯಾ ಸರ್ಕಾರಕ್ಕೆ ಭಾರತ ಸರ್ಕಾರ ಕೃತಜ್ಞತೆ ಹೇಳಿದೆ.

ಇದನ್ನೂ ಓದಿ : ಬಳ್ಳಾರಿಯಲ್ಲಿ ಹೃದಯವಿದ್ರಾವಕ ಘಟನೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ!

Btv Kannada
Author: Btv Kannada

Read More