ಬಳ್ಳಾರಿಯಲ್ಲಿ ಹೃದಯವಿದ್ರಾವಕ ಘಟನೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ!

ಬಳ್ಳಾರಿ : ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿಯೊಬ್ಬಳು ಮೂವರು ಮಕ್ಕಳ ಸಮೇತ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ  ಜಿಲ್ಲೆಯ ಕುರುಗೋಡು ತಾಲೂಕಿನ ಬರದನಹಳ್ಳಿಯಲ್ಲಿ ನಡೆದಿದೆ. ತಾಯಿ ಸಿದ್ದಮ್ಮ (30), ಮಕ್ಕಳಾದ ಅಭಿಗ್ನ (8), ಅವಣಿ (6) ಹಾಗೂ ಆರ್ಯ (4) ಮೃತರು.

ಬೆಳಗಾವಿ ಮೂಲದ ಸಿದ್ದಮ್ಮ, ಪತಿ ಕುಮಾರ್ ಹಾಗೂ ಮೂವರು ಮಕ್ಕಳೊಂದಿಗೆ ಕುರಿ ಮೇಯಿಸಲು ಬಳ್ಳಾರಿಗೆ ಬಂದಿದ್ದರು. ಸಿದ್ದಮ್ಮ ಕುಟುಂಬವು ಬರದನಹಳ್ಳಿಯ ರಾಘವೇಂದ್ರ ಎನ್ನುವವರ ಜಮೀನಿನಲ್ಲೇ ಕುರಿ ಕಟ್ಟಿ ಹಾಕುತ್ತಿದ್ದರು. ಇವರು ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಬಂದು, 3-4 ತಿಂಗಳು ಇಲ್ಲೇ ವಾಸ್ತವ್ಯ ಹೂಡುತ್ತಿದ್ದರು.

ಸೋಮವಾರ ಸಿದ್ದಮ್ಮ ಮತ್ತು ಪತಿ ಕುಮಾರ್ ನಡುವೆ ಗಲಾಟೆ ಆಗಿದೆ ಎನ್ನಲಾಗಿದೆ. ಗಲಾಟೆ ಬಳಿಕ ಬೆಳಗ್ಗೆ ಸಿದ್ದಮ್ಮ ಮೂವರು ಮಕ್ಕಳ ಸಮೇತ ಕುರಿ ಮೇಯಿಸಲು ಹೋಗಿದ್ದರು. ಕುರಿ ಮೇಯಿಸಲು ಹೋದಾಗಲೇ ಮಕ್ಕಳ ಸಮೇತ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಮಕ್ಕಳನ್ನ ಕೃಷಿ ಹೊಂಡಕ್ಕೆ ತಳ್ಳಿ, ಬಳಿಕ ಸಿದ್ದಮ್ಮ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕುರಿಗಳು ಹಟ್ಟಿಗೆ ಬಾರದೇ ಇದ್ದುದ್ದರಿಂದ ಅನುಮಾನಗೊಂಡು ಪತಿ ಕುಮಾರ್ ಹುಡುಕಾಟ ನಡೆಸಿದ್ದರು. ಈ ವೇಳೆ ಕೃಷಿ ಹೊಂಡದ ಬಳಿಯೇ ನಿಂತಿದ್ದ ಕುರಿಗಳನ್ನ ಕಂಡು ಗಾಬರಿಗೊಂಡಿದ್ದರು. ಪತ್ನಿ ಹಾಗೂ ಮಕ್ಕಳು ಕಾಣದೇ ಇದ್ದಾಗ ಕೃಷಿ ಹೊಂಡದಲ್ಲಿ ಇಣುಕಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತ ಸಿದ್ದಮ್ಮಳ ಸಹೋದರ ನೀಡಿದ ದೂರಿನನ್ವಯ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಇರಾನ್ ಯಾವುದೇ ಕಾರಣಕ್ಕೂ ಶರಣಾಗಲ್ಲ – ಟ್ರಂಪ್‌ಗೆ ಖಮೇನಿ ತಿರುಗೇಟು!

Btv Kannada
Author: Btv Kannada

Read More