ಇರಾನ್ ಯಾವುದೇ ಕಾರಣಕ್ಕೂ ಶರಣಾಗಲ್ಲ – ಟ್ರಂಪ್‌ಗೆ ಖಮೇನಿ ತಿರುಗೇಟು!

ಟೆಹ್ರಾನ್​ : ಇಸ್ರೇಲ್​ ಹಾಗೂ ಇರಾನ್​ ನಡುವಿನ ಸಂಘರ್ಷ ಮತ್ತೊಂದು ಭೀಕರ ಯುದ್ದವಾಗುವತ್ತ ಸಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರಿಗೆ ತೀರುಗೇಟು ನೀಡಿರುವ ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನ್ ಯಾವುದೇ ಕಾರಣಕ್ಕೂ ತಲೆಬಾಗುವುದಿಲ್ಲ, ಬಲವಂತವಾಗಿ ಹೇರಿದ ಶಾಂತಿ ಅಥವಾ ಯುದ್ಧವನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಏತನ್ಮಧ್ಯೆ, ಇಸ್ರೇಲ್–ಇರಾನ್​ ಸಂಘರ್ಷದಲ್ಲಿ ಅಮೆರಿಕ ಸೇನೆ ಹಸ್ತಕ್ಷೇಪ ಮಾಡಿದರೆ, ಅದಕ್ಕೆ ಎಂದೂ ಮಾಸದ ಅತಿ ದೊಡ್ಡ ಪೆಟ್ಟನ್ನು ನೀಡುವುದಾಗಿ ತಿಳಿಸಿದ್ದಾರೆ.

ಬೇಷರತ್ತಾಗಿ ಶರಣಾಗಿ ಎಂದು ಇರಾನ್ ಸುಪ್ರೀಂ ಲೀಡರ್ ಖಮೇನಿಗೆ ವಾರ್ನಿಂಗ್ ನೀಡಿದ್ದ ಡೊನಾಲ್ಡ್​ ಟ್ರಂಪ್ ಅವರ ಹೇಳಿಕೆಯ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಮೇನಿ, ಇಸ್ರೇಲ್​ ಪ್ರಾರಂಭಿಸಿದ ಯುದ್ಧದ ವಿರುದ್ಧ ಟೆಹ್ರಾನ್​ ದೃಢವಾಗಿ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದ್ದು, ನಮ್ಮ ಮೇಲೆ ದಾಳಿ ಮಾಡುವ ಮೂಲಕ ಇಸ್ರೇಲ್‌ ಅತೀ ದೊಡ್ಡ ತಪ್ಪು ಮಾಡಿದೆ. ಈ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದ್ದಾರೆ.

ಹುತಾತ್ಮರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಇರಾನ್‌ ಮೇಲೆ ದಾಳಿ ಮಾಡಿದ ಇಸ್ರೇಲ್‌ಗೆ ಶಿಕ್ಷೆ ಖಚಿತ ಎಂದು ಪ್ರತಿಜ್ಞೆ ಮಾಡಿದ್ದಾರೆ. ಟ್ರಂಪ್‌ ಅವರ ಬೇಷರತ್ತಾದ ಶರಣಾಗತಿ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಇರಾನ್‌ ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ. ಇಸ್ರೇಲ್‌ಗೆ ಅಮೆರಿಕ ಶಸ್ತ್ರಾಸ್ತ್ರಗಳ ನೆರವು ನೀಡಬಾರದು. ನೆರವು ನೀಡಿದ್ದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಖಮೇನಿ ಎಚ್ಚರಿಕೆ ನೀಡಿದ್ದಾರೆ.

ಸದ್ಯ, ಇಸ್ರೇಲ್-ಇರಾನ್ ಸಂಘರ್ಷ 6 ದಿನಕ್ಕೆ ಕಾಲಿಟ್ಟಿರುವಂತೆಯೇ ಈ ಹೇಳಿಕೆ ಬಂದಿದೆ. ನಡೆಯುತ್ತಿರುವ ಹಿಂಸಾಚಾರವು ಈಗಾಗಲೇ ಇರಾನ್‌ನಲ್ಲಿ 200ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಅವರಲ್ಲಿ ಹೆಚ್ಚಿನವರು ನಾಗರಿಕರು ಮತ್ತು ಕನಿಷ್ಠ 24 ಇಸ್ರೇಲಿ ನಾಗರಿಕರು ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ : ಕೇದಾರನಾಥ ಟ್ರಕ್ಕಿಂಗ್ ದಾರಿಯಲ್ಲಿ ಭೂಕುಸಿತ – ಇಬ್ಬರು ಸಾವು, ಮೂವರಿಗೆ ಗಾಯ!

 

 

 

Btv Kannada
Author: Btv Kannada

Read More