ನವದೆಹಲಿ : ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತ್ತಾ ಮೂಲಕ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಇಂದು (ಜೂ.17) ಮುಂಜಾನೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಹೀಗಾಗಿ ಕೋಲ್ಕತ್ತಾದಲ್ಲೇ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಗದಿತ ನಿಲುಗಡೆಯ ಸಮಯದಲ್ಲಿ ಪ್ರಯಾಣಿಕರು ಇಳಿಯಬೇಕಾಯಿತು. ವಿಮಾನದ ಎಡ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಕೋಲ್ಕತ್ತಾದಿಂದ ಮುಂಬೈಗೆ ಟೇಕಾಫ್ ಆಗುವುದು ವಿಳಂಬವಾಯಿತು.

ಏರ್ ಇಂಡಿಯಾ ವಿಮಾನ AI180 ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ವೇಳಾಪಟ್ಟಿಯ ಪ್ರಕಾರವೇ ಹೊರಟಿತ್ತು. ಆದಾಗ್ಯೂ, ಅದು ಬೆಳಗ್ಗೆ 12:45ಕ್ಕೆ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಎಡ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ನಾಲ್ಕು ಗಂಟೆಗಳಿಗೂ ಹೆಚ್ಚು ಸಮಯದ ನಂತರ, ಬೆಳಗ್ಗೆ 5:20ಕ್ಕೆ, ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಯುವಂತೆ ಪ್ರಕಟಣೆ ಹೊರಡಿಸಲಾಯಿತು. ವಿಮಾನ ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕ್ಯಾಪ್ಟನ್ ಪ್ರಯಾಣಿಕರಿಗೆ ತಿಳಿಸಿದ್ದಾರೆ.
ಅಹಮದಾಬಾದ್ ವಿಮಾನ ದುರಂತ : ಜೂ.12ರಂದು ಸರ್ದಾರ್ ವಲ್ಲಭಭಾಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತ್ತು. ಪರಿಣಾಮವಾಗಿ 270 ಮಂದಿ ದುರ್ಮರಣಕ್ಕೀಡಾದರು. ಈ ಅವಘಡವಾದ ನಂತರ ಏರ್ ಇಂಡಿಯಾ ವಿಮಾನದಲ್ಲಿ ಸಾಲು ಸಾಲು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.
ಇದನ್ನೂ ಓದಿ : ಇರಾನ್ ಸರ್ಕಾರಿ ವಾಹಿನಿ ಮೇಲೆ ಇಸ್ರೇಲ್ ಬಾಂಬ್ ದಾಳಿ – ನ್ಯೂಸ್ ಓದುತ್ತಿದ್ದ ಆ್ಯಂಕರ್ ಜಸ್ಟ್ ಮಿಸ್!







