ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡ್ತಿರುವ ಕಾಂತಾರ ಚಾಪ್ಟರ್-1 ಸಿನಿಮಾ ತಂಡಕ್ಕೆ ಆಘಾತದ ಮೇಲೆ ಆಘಾತ ಶುರುವಾಗಿವೆ. ಕಾಂತಾರ ಚಾಪ್ಟರ್-1 ಸಿನಿಮಾ ತಂಡ ಕೊನೆ ಹಂತದ ಚಿತ್ರೀಕರಣ ಮಾಡುವ ವೇಳೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗ್ತಿವೆ.
ಸಿನಿಮಾದ ಮೂವರು ಸಹ ಕಲಾವಿದರ ಸಾವು ಮಾಸುವ ಮುನ್ನವೇ ಮತ್ತೊಂದು ಆಘಾತ ಚಿತ್ರತಂಡಕ್ಕೆ ಎದುರಾಗಿದೆ. ಇತ್ತೀಚಿಗೆ ಕಾಂತಾರ ಚಾಪ್ಟರ್-1 ಚಿತ್ರದ ಚಿತ್ರೀಕರಣ ಶಿವಮೊಗ್ಗದ ಹೊಸನಗರದ ಮಾಣಿ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದ್ದ ವೇಳೆ ದೋಣಿ ಮಗುಚಿ ಬಿದ್ದು ದೊಡ್ಡ ಅವಘಡವೊಂದು ಸಂಭವಿಸಿದ್ದು, ಅದೃಷ್ಟವಶಾತ್ ರಿಷಬ್ ಶೆಟ್ಟಿ ಸೇರಿದಂತೆ 30ಕ್ಕೂ ಹೆಚ್ಚು ಕಲಾವಿದರು ಬಚಾವ್ ಆಗಿದ್ದಾರೆ. ಆ ಬಳಿಕ ಹೊಂಬಾಳೆ ಫಿಲಂ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆದರ್ಶ ಅವಘಡದ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಇದೀಗ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಹಶೀಲ್ದಾರ್ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಚಿತ್ರೀಕರಣಕ್ಕೆ ಸಂಬಂಧಿಸಿದ ಅನುಮತಿ ಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ. ‘ಕಾಂತಾರ ಭಾಗ 1 ಚಿತ್ರೀಕರಣದ ಸಂದರ್ಭದಲ್ಲಿ ಅನಾಹುತ ಎಂಬ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳ ಕುರಿತು ಸ್ಪಷ್ಟನೆ ನೀಡುವಂತೆ ಚಿತ್ರತಂಡಕ್ಕೆ ತಹಶೀಲ್ದಾರ್ ರಶ್ಮಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ವರದಿಯ ನಂತರ ಈ ನೋಟಿಸ್ ಜಾರಿಯಾಗಿದ್ದು, ಚಿತ್ರೀಕರಣಕ್ಕೆ ಪಡೆದಿರುವ ಎಲ್ಲಾ ಅನುಮತಿ ಪತ್ರಗಳನ್ನು ಮೂರು ದಿನಗಳ ಒಳಗೆ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸುವಂತೆ ಚಿತ್ರತಂಡಕ್ಕೆ ಸೂಚನೆ ನೀಡಲಾಗಿದೆ. ನೋಟಿಸ್‌ನಲ್ಲಿ, ಒಡ್ಡಿರುವ ಕಾಲಾವಧಿಯೊಳಗೆ ದಾಖಲೆಗಳನ್ನು ಸಲ್ಲಿಸದಿದ್ದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಚಿತ್ರತಂಡದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇದುವರೆಗೆ ಬಂದಿಲ್ಲ.
ಇದನ್ನೂ ಓದಿ : ಲೋಕಾ ಹೆಸರಲ್ಲಿ ಕೋಟಿ ಕೋಟಿ ಲೂಟಿ ಪ್ರಕರಣ – SP ಜೋಶಿ ಮನೆ ಮೇಲೆ ಲೋಕಾಯುಕ್ತ ದಾಳಿ.. ಜೋಶಿ ಪರಾರಿ!
