ಬೆಂಗಳೂರು : ಲೋಕಾಯುಕ್ತ ಹೆಸರು ಹೇಳಿ ಸರ್ಕಾರಿ ಅಧಿಕಾರಿಗಳಿಂದ ಕೋಟಿ ಕೋಟಿ ರೂ. ವಸೂಲಿ ಮಾಡಿರುವ ಕೇಸಲ್ಲಿ ನಿವೃತ್ತ ಹೆಡ್ಕಾನ್ಸ್ಟೇಬಲ್ ನಿಂಗಪ್ಪ ಅರೆಸ್ಟ್ ಆಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖಾಧಿಕಾರಿಗಳು ಹಲವು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಇದೀಗ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರ ಮನೆ ಮೇಲೆ ಲೋಕಾಯುಕ್ತ ತನಿಖಾಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀನಾಥ್ ಜೋಶಿ ಅವರು ವಾಸವಿರುವ ಕೋರಮಂಗಲದ ಮನೆಯಲ್ಲಿ 2025ರ ಜೂನ್ 15ರಂದು ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದ ತಂಡವು ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಜೋಶಿ ಅವರು ಮನೆಯಲ್ಲಿ ಇರಲಿಲ್ಲ, ಅವರ ಪುತ್ರ ಮನೆಯಲ್ಲಿದ್ದರು. ಜೋಶಿ ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಶ್ರೀನಾಥ್ ಜೋಶಿ ಅವರಿಗೆ ಲೋಕಾಯುಕ್ತ ಪೊಲೀಸ್ ವಿಭಾಗವು ನೋಟೀಸ್ ಕೂಡ ಜಾರಿಗೊಳಿಸಿತ್ತು. ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಬಂಧಿತ ಆರೋಪಿ ನಿಂಗಪ್ಪ ಕೋಟ್ಯಂತರ ರೂ.ವಸೂಲಿ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯು ಹಲವು ಪುರಾವೆ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರನ್ನು ಎತ್ತಂಗಡಿ ಮಾಡಲಾಗಿತ್ತು.
ಆರೋಪಕ್ಕೆ ಗುರಿಯಾಗಿರುವ ಎಸ್ಪಿ ಶ್ರೀನಾಥ ಜೋಶಿ ಅವರೊಂದಿಗೆ ಮುಖ್ಯಮಂತ್ರಿ ಸಚಿವಾಲಯದ ಉನ್ನತ ಅಧಿಕಾರಿಗಳಿಬ್ಬರು ನಿಕಟ ಸಂಪರ್ಕ ಹೊಂದಿದ್ದರು. ಮತ್ತು ಕೆಲವು ಪ್ರಕರಣಗಳಲ್ಲಿ ಅವರು ನೆರವು ಕೋರಿದ್ದರು ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ತನಿಖೆಯೂ ನಡೆದಿದೆ ಎಂದು ಗೊತ್ತಾಗಿದೆ. ಬಂಧಿತ ಆರೋಪಿ ನಿಂಗಪ್ಪ ಎಂಬಾತನೊಂದಿಗೆ ಹಾಲಿ ರಾಜ್ಯ ಸರ್ಕಾರದ ಪ್ರಭಾವಿ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳು ನಿಕಟ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ.
ನಿಂಗಪ್ಪ ಮೂಲತಃ ಚಿತ್ರದುರ್ಗದ ಹೊಸದುರ್ಗದಲ್ಲಿ ಕಾರ್ಯನಿರ್ವಹಿಸಿದ್ದ. ಆ ಅವಧಿಯಲ್ಲಿಯೇ ಲೋಕಾಯುಕ್ತ ಎಸ್ಪಿ ಶ್ರೀನಾಥ ಜೋಶಿ ಅವರು ಸಹ ಚಿತ್ರದುರ್ಗದಲ್ಲಿ ಕಾರ್ಯನಿರ್ವಹಿಸಿದ್ದರು. ಆಗಿನಿಂದಲೂ ನಿಂಗಪ್ಪ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ. ಬಂಧಿತ ಆರೋಪಿ ಹೆಡ್ ಕಾನ್ಸ್‌ಟೆಬಲ್ ನಿಂಗಪ್ಪ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದ. ಹಲವು ಬಾರಿ ತಿಳಿವಳಿಕೆ ನೋಟೀಸ್ ನೀಡಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ಮತ್ತು ಉತ್ತರವನ್ನೂ ನೀಡಿರಲಿಲ್ಲ. ಹಾಗಾಗಿ ಆತನನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ವಜಾಗೊಂಡ ಆದೇಶವನ್ನೂ ನಿಂಗಪ್ಪ ಪಡೆದಿಲ್ಲ ಎಂದು ಗೊತ್ತಾಗಿದೆ.
ಕರ್ತವ್ಯದಿಂದ ವಜಾಗೊಂಡ ನಂತರ ನಿಂಗಪ್ಪ ಲೋಕಾಯುಕ್ತ ಹೆಸರಿನಲ್ಲಿ ಅಧಿಕಾರಿಗಳಿಂದ ವಸೂಲಿಗಿಳಿದಿದ್ದ. ಬಳಿಕ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಸುಲಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದ. ಈ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲು ಸೇರಿದ್ದ ಎಂದು ತಿಳಿದು ಬಂದಿದೆ.
ವಜಾಗೊಂಡಿರುವ ಮುಖ್ಯ ಪೇದೆ ನಿಂಗಪ್ಪ ಎಂಬಾತನು 8ಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳಿಂದ ಹಣ ವಸೂಲು ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಮುಂದೆ, ಸಚಿವರುಗಳ ಆಪ್ತ ಕಾರ್ಯದರ್ಶಿಗಳ ಹೆಸರು ಸೇರಿದಂತೆ ಹಲವರ ಹೆಸರುಗಳನ್ನು ಬಾಯ್ದಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ತನಿಖೆ ವೇಳೆಯಲ್ಲಿ ನಿಂಗಪ್ಪ ಪೊಲೀಸ್ ಅಧಿಕಾರಿಗಳ ಹೆಸರು ಬಾಯ್ದಿಟ್ಟಿದ್ದಾನೆ. ಈ ಹೊತ್ತಿನಲ್ಲಿಯೇ ಆರೋಪಿ ನಿಂಗಪ್ಪನೊಂದಿಗೆ ವಿಧಾನಸೌಧದಲ್ಲಿರುವ ಸಚಿವರುಗಳ ಆಪ್ತ ಕಾರ್ಯದರ್ಶಿಗಳ ಹೆಸರುಗಳನ್ನೂ ಬಹಿರಂಗಪಡಿಸಿದ್ದಾನೆ ಎಂಬುದೂ ಸಹ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ : ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವು!
