ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆ ಅವಾಂತರಗಳು ಸಂಭವಿಸಿವೆ. ಬೈಕ್‌ನಲ್ಲಿ ಹೋಗುತ್ತಿದ್ದಾಗ ಮರಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಎಲೆಕಲ್ ಘಾಟಿ ಬಳಿ ನಡೆದಿದೆ.
55 ವರ್ಷದ ಅನಿಲ್ ಮೃತಪಟ್ಟ ಬೈಕ್ ಸವಾರ. ಅನಿಲ್ ಬೈಕ್‌ನಲ್ಲಿ ಬಾಳೆಹೊನ್ನೂರಿಗೆ ಹೋಗುತ್ತಿದ್ದರು. ಈ ವೇಳೆ ಎಲೆಕಲ್ ಘಾಟಿ ಬಳಿ ಹೋಗುವಾಗ ಭಾರೀ ಗಾಳಿ-ಮಳೆಗೆ ಮರ ಬಿದ್ದಿದ್ದು, ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಮರ ಬಿದ್ದು ತೀವ್ರ ಗಾಯಗೊಂಡಿದ್ದ ಅವರನ್ನು ಕೂಡಲೇ ಪೊಲೀಸರು ಹಾಗೂ ಸಾರ್ವಜನಿಕರು ಬಾಳೆಹೊನ್ನೂರು ಆಸ್ಪತ್ರೆಗೆ ಕೊಂಡೊಯ್ದರು.
ಆದರೆ ತಲೆಗೆ ಭಾರೀ ಪೆಟ್ಟು ಬಿದ್ದ ಪರಿಣಾಮ ಮಾರ್ಗಮಧ್ಯೆಯೇ ಅನಿಲ್ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನ ಸಿಡಿಲು ಬಡಿದು ಇಬ್ಬರು ಹಾಗೂ ಮರಬಿದ್ದು ಓರ್ವ ಸಾವನ್ನಪ್ಪಿದ್ದರು. ಜಿಲ್ಲೆಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ಕನೇ ಜೀವ ಬಲಿಯಾದಂತಾಗಿದೆ.
ಇದನ್ನೂ ಓದಿ : ಲೋಕಾ ಹೆಸರಲ್ಲಿ ಕೋಟಿ ಕೋಟಿ ವಸೂಲಿ – ನಿಂಗಪ್ಪ ಅರೆಸ್ಟ್ ಆಗ್ತಿದ್ದಂತೆ ಲೋಕಾ ವಸೂಲಿಯ 3 ಸ್ಫೋಟಕ ದಾಖಲೆ ಬಯಲು!
