ಪ್ರಭಾಸ್‌ ನಟನೆಯ “ದಿ ರಾಜಾಸಾಬ್” ಟೀಸರ್‌ ಔಟ್ – ಡಿ.5ಕ್ಕೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ!

ಟಾಲಿವುಡ್​ನ ರೆಬೆಲ್‌ ಸ್ಟಾರ್‌ ಪ್ರಭಾಸ್‌ ನಟನೆಯ, ಮಾರುತಿ ನಿರ್ದೇಶನದ “ದಿ ರಾಜಾಸಾಬ್‌” ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿದೆ. ಮೇಕಿಂಗ್‌ ಮೂಲಕ ಗಮನ ಸೆಳೆದ ಈ ಸಿನಿಮಾದ ಮೊದಲ ಟೀಸರ್‌ ಇದೀಗ ಬಿಡುಗಡೆ ಆಗಿದೆ. ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಟಿ ಜಿ ವಿಶ್ವ ಪ್ರಸಾದ್ ಈ ಚಿತ್ರದ ನಿರ್ಮಾಪಕರು.

“ದಿ ರಾಜಾ ಸಾಬ್” ಟೀಸರ್ ನೋಡಿದ ಅಭಿಮಾನಿಗಳು ಸದ್ಯ ಪುಳಕಿತರಾಗಿದ್ದಾರೆ. ಇದರಲ್ಲಿ ಪ್ರಭಾಸ್ ಅವರ ವಿಂಟೇಜ್ ಲುಕ್ ಖಡಕ್‌ ಆಗಿದೆ. ಮೂವರು ನಾಯಕಿಯರು, ಪ್ರಭಾಸ್ ಅವರ ಎಂಟ್ರಿ, ನಗಿಸುವ ಕಾಮಿಡಿ ಡೈಲಾಗ್‌ಗಳು ರೊಮ್ಯಾಂಟಿಕ್ ಟ್ರ್ಯಾಕ್ ಅದ್ಭುತವಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬಾಲಿವುಡ್‌ ನಟ ಸಂಜಯ್ ದತ್ ಅವರ ವಿಚಿತ್ರ ಗೆಟಪ್‌, ರಾಜಮನೆತನದ ಸುತ್ತ ನಡೆಯುವ ಕಥೆ ಮತ್ತು ಹಾರರ್ ಅಂಶಗಳು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

ಟೀಸರ್‌ನಲ್ಲಿ ಪ್ರಭಾಸ್ ಎರಡು ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪಕ್ಕಾ ಲವರ್‌ಬಾಯ್‌ ಲುಕ್‌ ಮತ್ತು ಮಾಸ್‌ ಆಕ್ಷನ್‌ ಅವತಾರದಲ್ಲಿ ಎದುರಾದರೆ, ಮತ್ತೊಂದರಲ್ಲಿ ಗಾಢವಾದ, ಅತೀಂದ್ರಿಯ ಶಕ್ತಿಯನ್ನು ಆವಾಹಿಸಿಕೊಂಡಂತೆ ಕಂಡಿದ್ದಾರೆ. ಟೀಸರ್‌ನಲ್ಲಿ ಮಸ್ತ್ ನೃತ್ಯ, ಪಂಚ್‌ ಡೈಲಾಗ್‌ಗಳಿಂದಲೂ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಪ್ರಭಾಸ್‌ ಜತೆಗೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಈ ಚಿತ್ರದ ತ್ರಿವಳಿ ನಾಯಕಿಯರು. ಪ್ರತಿ ಪಾತ್ರವೂ ಶಾಪಗ್ರಸ್ತ ಮಹಲಿನ ಕಥೆಗೆ ನಿಗೂಢತೆಯ ಪದರಗಳನ್ನು ಸೇರಿಸುತ್ತಾ ಹೋಗುತ್ತಾರೆ.

“ದಿ ರಾಜಾಸಾಬ್‌” ಚಿತ್ರದ ಮೂಲಕ ನಾವು ಏನನ್ನಾದರೂ ದೊಡ್ಡದನ್ನೇ ನಿರ್ಮಿಸಲು ಬಯಸಿದ್ದೇವೆ. ಈ ವರೆಗೂ ನೋಡದ ಸೆಟ್‌ಗಳು ಈ ಸಿನಿಮಾದಲ್ಲಿರಲಿದೆ. ನಮ್ಮ ಈ ಸಿನಿಮಾ ಇದೇ ವರ್ಷದ ಡಿಸೆಂಬರ್ 5ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ ನಿರ್ಮಾಪಕ ಟಿಜಿ ವಿಶ್ವ ಪ್ರಸಾದ್ ಹಂಚಿಕೊಂಡಿದ್ದಾರೆ.

“ರಾಜಾಸಾಬ್ ಒಂದು ಪ್ರಕಾರದ ಪ್ರಯಾಣ – ಇದು ಭಯಾನಕ ಮತ್ತು ಫ್ಯಾಂಟಸಿ, ನೈಜ ಮತ್ತು ಅತಿವಾಸ್ತವಿಕತೆಯ ನಡುವೆ ಹರಿಯುತ್ತದೆ. ಥಮನ್ ಅವರ ರೋಮಾಂಚಕಾರಿ ಸಂಗೀತ ಇಡೀ ಸಿನಿಮಾದ ಹೈಲೈಟ್‌ ಎಂದು ನಿರ್ದೇಶಕ ಮಾರುತಿ ಹೇಳಿದ್ದಾರೆ.

ಇದನ್ನೂ ಓದಿ : ಸೌದಿ ಏರ್‌ಲೈನ್ಸ್‌ ವಿಮಾನದ ಟೈಯರ್‌ನಿಂದ ಚಿಮ್ಮಿದ ಬೆಂಕಿ – ಲಕ್ನೋ ಏರ್​ಪೋರ್ಟ್​ನಲ್ಲಿ ತಪ್ಪಿದ ಭಾರೀ ದುರಂತ!

Btv Kannada
Author: Btv Kannada

Read More