‘ಫಿನಿಕ್ಸ್’ ಚಿತ್ರದ ಶೂಟಿಂಗ್​​ ವೇಳೆ ನಟ ಭಾಸ್ಕರ್ ಶೆಟ್ಟಿ ಕಾಲಿಗೆ ಪೆಟ್ಟು!

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಫಿನಿಕ್ಸ್” ಚಿತ್ರದ ಚಿತ್ರೀಕರಣ ಬೆಂಗಳೂರಿನ ವಡೇರಹಳ್ಳಿಯಲ್ಲಿ ನಡೆಯುತ್ತಿದೆ. ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿರುವ ಈ ಸಂದರ್ಭದಲ್ಲಿ ಭಾರೀ ಅನಾಹುತವೊಂದು ನಡೆದಿದೆ. ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟ ಭಾಸ್ಕರ್ ಶೆಟ್ಟಿ ಅವರ ಕಾಲಿಗೆ ಬೆಂಕಿ ತಗುಲಿದೆ. ಆದರೆ ಅಲ್ಲಿದವರ ಸಮಯ ಪ್ರಜ್ಞೆಯಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಭಾಸ್ಕರ್ ಶೆಟ್ಟಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಸ್ತುತ “ಫಿನಿಕ್ಸ್” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ.

ಘಟನೆಯ ಬಗ್ಗೆ ನಟ ಭಾಸ್ಕರ್ ಶೆಟ್ಟಿ ಮಾತನಾಡಿ, “ಫಿನಿಕ್ಸ್” ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದೇನೆ. ವಿಲನ್ ಅನ್ನು ಹಿಡಿಯಲು ನಾನು ಅವನಿರುವ ಸ್ಥಳಕ್ಕೆ ಹೋಗುತ್ತೇನೆ. ಆಗ ಅಲ್ಲಿದವರು ನನ್ನ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಸನ್ನಿವೇಶದ ಚಿತ್ರೀಕರಣದ ಸಂದರ್ಭ. ಈ ಸಂದರ್ಭದಲ್ಲಿ ನನ್ನ ಕಾಲಿಗೆ ಪೆಟ್ಟಾಯಿತು. ತಕ್ಷಣ ಚಿತ್ರತಂಡದವರು ನನ್ನನ್ನು ಆರೈಕೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರೂ ಆಗಿರುವ ಓಂಪ್ರಕಾಶ್ ರಾವ್ ಅವರು ಸಹ ನನ್ನ ವಿಶೇಷ ಕಾಳಜಿ ಬಗ್ಗೆ ವಹಿಸಿದ್ದರು.‌ ಅವರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. “ಫಿನಿಕ್ಸ್” ಓಂಪ್ರಕಾಶ್ ರಾವ್ ನಿರ್ದೇಶನದ 49ನೇ ಚಿತ್ರ. ಇದೊಂದು ಮಹಿಳಾ ಪ್ರಾಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಭಾಸ್ಕರ್ ಶೆಟ್ಟಿ, ನಿಮಿಕಾ ರತ್ನಾಕರ್,‌ ಕಾಕ್ರೋಜ್ ಸುಧೀ, ಪ್ರಸನ್ನ ಮುಂತಾದವರು ತಾರಾಬಳಗದಲ್ಲಿದ್ದಾರೆ. ರವಿ ವಲ್ಲೂರಿ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕರೊಬ್ಬರು ಸಂಗೀತ ಸಂಯೋಜಿಸಲಿದ್ದಾರೆ.

ಇದನ್ನೂ ಓದಿ : ಸೌದಿ ಏರ್‌ಲೈನ್ಸ್‌ ವಿಮಾನದ ಟೈಯರ್‌ನಿಂದ ಚಿಮ್ಮಿದ ಬೆಂಕಿ – ಲಕ್ನೋ ಏರ್​ಪೋರ್ಟ್​ನಲ್ಲಿ ತಪ್ಪಿದ ಭಾರೀ ದುರಂತ!

Btv Kannada
Author: Btv Kannada

Read More