ಸೌದಿ ಏರ್‌ಲೈನ್ಸ್‌ ವಿಮಾನದ ಟೈಯರ್‌ನಿಂದ ಚಿಮ್ಮಿದ ಬೆಂಕಿ – ಲಕ್ನೋ ಏರ್​ಪೋರ್ಟ್​ನಲ್ಲಿ ತಪ್ಪಿದ ಭಾರೀ ದುರಂತ!

ಲಕ್ನೋ : ಅಹಮದಾಬಾದ್‌ನಲ್ಲಿ ವಿಮಾನ ದುರಂತ ಘಟನೆ ಸಂಭವಿಸಿದ ಬಳಿಕ ಇತರೇ ವಿಮಾನಗಳಲ್ಲೂ ಒಂದಿಲ್ಲೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ವರದಿಯಾಗುತ್ತಿದೆ. ಅದೇ ರೀತಿ ಹಜ್‌ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸೌದಿಯಾ ಏರ್‌ಲೈನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ವಿಮಾನ ಚಕ್ರಗಳು ರನ್‌ವೇಗೆ ಇಳಿಯುತ್ತಿದ್ದಂತೆ ಟೈಯರ್‌ನಿಂದ ಬೆಂಕಿ ಕಿಡಿಗಳು ಚಿಮ್ಮಿದ್ದು, ದಟ್ಟ ಹೊಗೆ ಹೊಮ್ಮಿದೆ. ಅದೃಷ್ಟವಶಾತ್‌ ಯಾವುದೇ ದುರಂತ ಸಂಭವಿಸದೇ ನೂರಾರು ಯಾತ್ರಿಕರು, ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮೂಲಗಳ ಪ್ರಕಾರ, SV3112 ಸಂಖ್ಯೆಯ ವಿಮಾನ ಶನಿವಾರ ರಾತ್ರಿ 10:45ಕ್ಕೆ ಜೆಡ್ಡಾದಿಂದ 250 ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿತ್ತು. ಹಜ್‌ಗೆ ಹೊರಟಿದ್ದ ವೇಳೆ ಬೆಳಗ್ಗೆ 6:30ರ ಸುಮಾರಿಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ವಿಮಾನದ ಟೈಯರ್‌ನಿಂದ ಬೆಂಕಿಯ ಕಿಡಿಗಳು ಚಿಮ್ಮಿದೆ ಜೊತೆಗೆ ಟೈರ್‌ನಿಂದ ದಟ್ಟ ಹೊಗೆ ಬಂದಿದೆ.

ವಿಮಾನ ನಿಲ್ದಾಣದ ಅಗ್ನಿಶಾಮಕ ಮತ್ತು ರಕ್ಷಣಾ ತಂಡವು ತಕ್ಷಣವೇ ನೆರವಿಗೆ ಧಾವಿಸಿ ಕೇವಲ 20 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ. ಪ್ರಾಥಮಿಕ ತನಿಖೆಯಲ್ಲಿ ಹೈಡ್ರಾಲಿಕ್ ಸಿಸ್ಟಮ್ ಸೋರಿಕೆಯೇ ತಾಂತ್ರಿಕ ದೋಷಕ್ಕೆ ಕಾರಣ ಎಂದು ತಿಳಿದುಬಂದಿದೆ. ಒಂದು ವೇಳೆ ವಿಮಾನ ಟೇಕ್‌ ಆಫ್‌ ಸಮಯದಲ್ಲಿ ದೋಷ ಕಾಣಿಸಿಕೊಂಡಿದ್ದರೆ, ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ವಿಮಾನಯಾನ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಗೆ ಅನಾರೋಗ್ಯ – ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲು!

Btv Kannada
Author: Btv Kannada

Read More