ನವದೆಹಲಿ : ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆ ಬಿಜೆಪಿ-ಕಾಂಗ್ರೆಸ್ ನಡುವೆ ಕಿಚ್ಚು ಹೊತ್ತಿಸಿದೆ. ಉಭಯ ಪಕ್ಷಗಳು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಾರೀ ಹೈಡ್ರಾಮಾ ನಡೆದಿದೆ.
ಸಂಸತ್ತಿನ ಮಕರ ದ್ವಾರದ ಬಳಿ ನಡೆಯುತ್ತಿದ್ದ ಪ್ರೊಟೆಸ್ಟ್ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಕುಸಿದು ಬಿದ್ದಿದ್ದು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಳ್ಳಿದ್ರಿಂದ ಬಿದ್ದು ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಪ್ರತಿಭಟನೆ ವೇಳೆ ಗಾಯಗೊಂಡ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಾಪ್ ಸಾರಂಗಿ ಅವರ ಆರೋಪವನ್ನು ನಿರಾಕರಿಸಿದ್ದಾರೆ. ಖರ್ಗೆ, ಪ್ರಿಯಾಂಕ ವಾದ್ರಾರನ್ನು ಬಿಜೆಪಿಯವರೇ ತಳ್ಳಿದ್ರು ಎಂದು ಕಾಂಗ್ರೆಸ್ ಸಂಸದರೂ ಪ್ರತಿ ಆರೋಪ ಮಾಡಿದ್ದಾರೆ. ಬಿಜೆಪಿ ಮುಖಂಡರು ಸಂಸತ್ ಹೊರಗಿನ ವಿಡಿಯೋವನ್ನು ಪರಿಶೀಲಿಸುತ್ತಿದ್ದು, ವಿಡಿಯೋ ಪರಿಶೀಲಿಸಿ ನಂತರ FIR ದಾಖಲಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ vs ಕಾಂಗ್ರೆಸ್ ಪ್ರೊಟೆಸ್ಟ್ : ಚಳಿಗಾಲದ ಅಧಿವೇಶನದಲ್ಲಿ ʻಸಂವಿಧಾನʼ ಕುರಿತ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಅಮಿತ್ ಶಾ ಅವರು ಮಾತನಾಡುತ್ತಾ, ʻಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಇದೊಂದು ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಅವರಿಗೆ ಸ್ವರ್ಗದಲ್ಲಿ ಸ್ಥಾನವಾದರೂ ಸಿಗುತ್ತಿತ್ತುʼ ಎಂದು ಹೇಳಿದ್ದರು. ಈ ಕುರಿತ ವೀಡಿಯೋಗಳನ್ನು ವಿಪಕ್ಷ ನಾಯಕರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೇ ನೀಡಬೇಕು, ಅಂಬೇಡ್ಕರ್ ವಿರುದ್ಧದ ಟೀಕೆಗೆ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ನಿಂದ ಅಂಬೇಡ್ಕರ್‌ಗೆ ಅನ್ಯಾಯವಾಗಿದೆ ಎನ್ನುವ ಪ್ಲೆ ಕಾರ್ಡ್ ಹಿಡಿದು ಬಿಜೆಪಿ ಸದಸ್ಯರು ಪ್ರತಿಭಟನೆಗಿಳಿದಿದ್ದಾರೆ. ಅಮಿತ್ ಶಾ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲಾಗಿದೆ. ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಅಂಬೇಡ್ಕರ್ ವಿರುದ್ಧ ಅಮಿತ್ ಶಾ ಮಾತನಾಡಿಲ್ಲ. ಸಂಸತ್ತಿನಲ್ಲಿ ಮಾಡಿದ ಕಾಮೆಂಟ್‌ಗಳನ್ನು ಕಾಂಗ್ರೆಸ್ ತಿರುಚಿದ ರೀತಿ ಅತ್ಯಂತ ಖಂಡನೀಯವಾಗಿದೆ ಎಂದು ಬಿಜೆಪಿ ಸಂಸದರೂ ಕೂಡ ಸಂಸತ್ ಆವರಣದಲ್ಲಿ ʻಕಾಂಗ್ರೆಸ್ ನಿಂದ ಅಂಬೇಡ್ಕರ್‌ಗೆ ಅನ್ಯಾಯವಾಗಿದೆʼ ಅನ್ನೋ ಪ್ಲೆ ಕಾರ್ಡ್ ಹಿಡಿದು ಪ್ರತಿಭಟನೆಗಿಳಿದಿದ್ದಾರೆ.
ಇದನ್ನೂ ಓದಿ : ರಶ್ಮಿಕಾ ಲೈಫ್ ಪಾರ್ಟ್ನರ್ ಹೀಗಿರಬೇಕಂತೆ – ಈ ಕ್ವಾಲಿಟೀಸ್ ಶೆಟ್ರಲ್ಲಿ ಇರಲಿಲ್ವಾ? ಎಂದ ನೆಟ್ಟಿಗರು..!