ನವದೆಹಲಿ : ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಕಳ್ಳಸಾಗಾಣಿಕೆ ಮೂಲಕ ದೇಶದಿಂದ ಹೊರ ಹೋಗಿದ್ದ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ 297 ವಿಶಿಷ್ಟ ಕಲಾಕೃತಿಗಳು, ವಸ್ತುಗಳು ಪ್ರಧಾನಿ ಕೈಸೇರಿವೆ.
ಅತ್ಯಮೂಲ್ಯವಾದ 297 ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿರುವ ಅಮೆರಿಕಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಮತ್ತು ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧ ಹೋರಾಟವನ್ನು ದೃಢಗೊಳಿಸುವ ನಿಟ್ಟಿನಲ್ಲಿ ಭಾರತಕ್ಕೆ 297 ಬೆಲೆಬಾಳುವ ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿರುವ ಅಮೆರಿಕ ಸರ್ಕಾರ ಮತ್ತು ಅಧ್ಯಕ್ಷ ಜೋ- ಬೈಡನ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ವೇಳೆ ಹಲವು ಪುರಾತನ ವಸ್ತುಗಳನ್ನು ಹಸ್ತಾಂತರಿಸಲಾಗಿತ್ತು. 2021ರಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಹೋದಾಗ 157 ವಸ್ತುಗಳನ್ನು ಸ್ವೀಕರಿಸಿದ್ದರು.
ಇದರಲ್ಲಿ 12ನೇ ಶತಮಾನದ ನಟರಾಜ ವಿಗ್ರಹವೂ ಸೇರಿದೆ. 2023ರಲ್ಲಿ ಪ್ರಧಾನಿ ಮೋದಿಯವರ ಭೇಟಿಯ ನಂತರ ಅಮೆರಿಕವು ಭಾರತಕ್ಕೆ 105 ವಸ್ತುಗಳನ್ನು ಹಿಂದಿರುಗಿಸಿತು. ಈ ಮೂಲಕ ಅಮೆರಿಕವೊಂದರಿಂದಲೇ ಇಲ್ಲಿಯವರೆಗೆ 578 ಪುರಾತನ ಹಾಗೂ ಬೆಲೆ ಕಟ್ಟಲಾಗದ ವಸ್ತುಗಳನ್ನು ಭಾರತಕ್ಕೆ ವಾಪಸ್ ಮಾಡಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ತುಪ್ಪ ಉತ್ಪಾದನೆಯ ಗುಣಮಟ್ಟ ಪರಿಶೀಲನೆಗೆ ನಿರ್ಧಾರ – ಸಚಿವ ದಿನೇಶ್ ಗುಂಡೂರಾವ್..!