ನಮ್ಮ ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗಾಗಲೇ ಕನ್ನಡದಲ್ಲಿ ನಿರ್ಮಾಣವಾಗಿ ಪ್ರೇಕ್ಷಕರನ್ನು ರಂಜಿಸಿವೆ. ಅದೇ ಹಾದಿಯಲ್ಲಿ ಇದೀಗ ಮತ್ತೊಂದು ಸಿನಿಮಾ ಸೆಟ್ಟೇರಿದೆ.
‘ಕೇಸ್ ಆಫ್ ಕೊಂಡಾನ’, ‘ಕದ್ದ ಚಿತ್ರ’, ‘ಗ್ರೇ ಗೇಮ್ಸ್’, ‘ಜೋಗ್ 101’ ಹೀಗೆ ಭಿನ್ನ ಕತೆಗಳನ್ನು ಆಯ್ಕೆ ಮಾಡಿಕೊಂಡು ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರೆದುರು ಬರುತ್ತಿರುವ ನಟ ವಿಜಯ್ ರಾಘವೇಂದ್ರ ಇದೀಗ ಮತ್ತೊಂದು ವಿಭಿನ್ನವಾದ ಕತೆಯುಳ್ಳ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. ‘ರುದ್ರಾಭಿಷೇಕಂ’ ಹೆಸರಿನ ಜನಪದ ಮಿಳಿತವಾದ ಭಿನ್ನ ಕತೆಯುಳ್ಳ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರು ನಟಿಸಲಿದ್ದು, ಈ ಸಿನಿಮಾದಲ್ಲಿ ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಮುಹೂರ್ತ ಸಮಾರಂಭ ದೇವನಹಳ್ಳಿ ಬಳಿಯ ಫಾರಂ ಹೌಸ್ ಒಂದರಲ್ಲಿ ನಿನ್ನೆ ಸರಳವಾಗಿ ನೆರವೇರಿದೆ.
ಮುಹೂರ್ತದ ನಂತರ ಮಾತನಾಡಿದ ವಿಜಯ ರಾಘವೇಂದ್ರ, ಇನ್ನೊಂದು ಒಳ್ಳೆಯ ಪ್ರಯತ್ನ. ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನೆಲೆಯ ಜತೆಗೆ ಒಂದು ಸಣ್ಣ ಇತಿಹಾಸ, ಅದರ ವೈಭವವನ್ನು ತೆಗೆದುಕೊಂಡು ಹೋಗುವ ಕಥೆ. ಕಮರ್ಷಿಯಲ್ ಎಲಿಮೆಂಟ್ ಒಳಗೊಂಡಿದ್ದರೂ ಕೂಡ ಸಾಕಷ್ಟು ಡಿವೈನಿಟಿ ಇರುವ ಚಿತ್ರ. ನಿರ್ದೇಶಕರು ವೀರಗಾಸೆ ಕಲೆಯ ಹಿನ್ನೆಲೆ ಇಟ್ಟುಕೊಂಡು ಒಂದೊಳ್ಳೆ ಕಾನ್ಸೆಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಾನು ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲ ಚಿತ್ರದಲ್ಲಿ ನನಗೆ ಸಾಕಷ್ಟು ಗೆಟಪ್ಗಳಿವೆ ಎಂದು ಹೇಳಿದರು.
ನಿರ್ದೇಶಕ ವಸಂತ್ ಕುಮಾರ್ ಮಾತನಾಡುತ್ತ.. ನಾನು ಕಳೆದ ಎರಡುವರೆ ದಶಕಗಳಿಂದಲೂ ಚಿತ್ರರಂಗದಲ್ಲಿದ್ದೇನೆ. ಹಲವಾರು ಚಿತ್ರಗಳಿಗೆ ಸಹನಿರ್ದೇಶನ, ಕಥೆ, ಚಿತ್ರಕಥೆ ಬರೆದಿದ್ದೇನೆ. ಇದೊಂದು ಟ್ರೆಡಿಷನಲ್ ಸಬ್ಜೆಕ್ಟ್. ನಮ್ಮ ನಾಡಿನ ಜನಪದ ಹಿನ್ನೆಲೆ ಇಟ್ಟುಕೊಂಡು, ನೂರಾರು ವರ್ಷಗಳ ಇತಿಹಾಸ ಇರುವ ಒಂದು ಕಲೆಯನ್ನು ಈ ಚಿತ್ರದ ಮೂಲಕ ಹೇಳಹೊಟಿದ್ದೇನೆ. ಒಂದೂವರೆ ವರ್ಷದಿಂದ ಸಾಕಷ್ಟು ರೀಸರ್ಚ್ ಮಾಡಿ ಈ ಕಥೆ ರೆಡಿ ಮಾಡಿಕೊಂಡಿದ್ದೇನೆ. ಕಥೆ ಮಾಡಿಕೊಂಡು ಒಂದಷ್ಟು ಮಠಾಧೀಶರನ್ನು ಸಂಪರ್ಕಿಸಿದಾಗ ಅವರೆಲ್ಲ ಒಳ್ಳೆ ಪ್ರಯತ್ನ. ಗೆದ್ದೇ ಗೆಲ್ತೀಯ ಎಂದು ಶುಭ ಹಾರೈಸಿದರು. ಈ ಕಥೆಯ ಮೂಲ ಹಂದರ ವೀರಭದ್ರ ದೇವರು. ಆತ ಹೇಗೆ ಬಂದ, ಆತ ಬರಲು ಕಾರಣವೇನು ಎಂಬುದನ್ನು ಇಲ್ಲಿ ಹೇಳುತ್ತಿದ್ದೇನೆ. ನಾನು ಕಥೆ ಮಾಡುವಾಗಲೇ ವಿಜಯ ರಾಘವೇಂದ್ರ ಅವರನ್ನು ವೀರಗಾಸೆ ಗೆಟಪ್ನಲ್ಲಿ ಕಲ್ಪಿಸಿಕೊಂಡೆ. ಈ ಮೂಲಕ ನಾಡಿನ ಜನತೆಗೆ ಒಂದೊಳ್ಳೆ ಸಿನಿಮಾ ಕಟ್ಟಿ ಕೊಡಬೇಕೆಂದುಕೊಂಡುದ್ದೇನೆ. ಮೊದಲ ಹಂತದಲ್ಲಿ ಇದೇ ಫಾರಂ ಹೌಸ್ ನಲ್ಲಿ 15 ದಿನ ಶೂಟ್ ಮಾಡುತ್ತಿದ್ದೇವೆ. ನಂತರ ಇಡೀ ಊರತುಂಬ ಆಲದಮರ, ಹಿಂದುಳಿದವರೇ ಇರುವಂಥ ಲೊಕೇಶನ್ ಹುಡುಕೊದಾಗ ಸಿಕ್ಕಿದ್ದೇ ಚಿಕ್ಕತದಮಂಗಲ. ಅಲ್ಲಿ ಜಾಸ್ತಿ ಇರುವುದೇ ವೀರಭದ್ರ ದೇವರ ಒಕ್ಕಲಿನವರು. ಅಲ್ಲಿ ಹೋಗಿ ಶೂಟಿಂಗ್ ಮಾಡಬೇಕೆಂದಾಗ ಇಡೀ ಊರ ಜನತೆ ನಮಗೆ ಸಹಕಾರ ಕೊಡ್ತಿದಾರೆ ಎಂದು ಹೇಳಿದರು.
ಇನ್ನು ಜಯರಾಮಣ್ಣ, ಶಿವರಾಮ್, ಚಿದಾನಂದ್, ಹಡಪದ, ರಮೇಶ್, ಮಂಜುನಾಥ್, ಮುನಿಕೃಷ್ಣಪ್ಪ, ರವಿ, ಅಶ್ವಥ್, ಆನಂದ್ ಸೇರಿ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ರುದ್ರಾಭಿಷೇಕಂ ಚಿತ್ರದ ನಾಯಕಿಯಾಗಿ ಮೈಸೂರು ಮೂಲದ ರಂಗಭೂಮಿ ಪ್ರತಿಭೆ ಪ್ರೇರಣಾ ನಟಿಸುತ್ತಿದ್ದಾರೆ. ಮತ್ತೊಬ್ಬ ದೈತ್ಯಪ್ರತಿಭೆ ಬಲ ರಾಜವಾಡಿ ಅವರು ಊರ ಗೌಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಲ್ಲದೆ ತಾರಕೇಶ್ವರ ಸೇರಿ ಅನೇಕ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಮುತ್ತುರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇದನ್ನೂ ಓದಿ : ‘ಬಡವ್ರ ಮಕ್ಳೂ ಬೆಳಿಬೇಕು ಕಣ್ರಯ್ಯ’ ಚಿತ್ರದ ಟ್ರೇಲರ್ ರಿಲೀಸ್ – ಶುಭ ಹಾರೈಸಿದ ನಟ ಧನಂಜಯ್..!