ಕೊಡಗು : ಕೊಡಗು ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ಭಾನುವಾರ (ಮೇ.25) ಬೆಳಗ್ಗೆಯಿಂದಲೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಭಾರೀ ಮಳೆಗೆ ಕೊಡಗಿನ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

ನದಿ ತೀರದ ನಿವಾಸಿಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ಹೀಗಾಗಿ, ಎರಡು ದಿನಗಳ ಕಾಲ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಡಗು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಎಲ್ಲ ಕಾಲೇಜುಗಳಿಗೆ ಇಂದು (ಮೇ 26, 27) ನಾಳೆ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.

ಹಾಗೇ, ಅಂಗನವಾಡಿಗಳಿಗೂ ಕೂಡ ಜಿಲ್ಲಾಡಳಿತ ರಜೆ ಘೋಷಿಸಿದೆ. ಕೊಡಗು ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಹಾವಿದ್ಯಾಲಯಗಳಿಗೆ ಎರಡು ದಿನ ರಜೆ ಘೋಷಿಸಿ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಆದೇಶ ಹೊರಡಿಸಿದ್ದಾರೆ.

ಕಾವೇರಿ ಉಗಮಸ್ಥಾನ ತಲಕಾವೇರಿ ಭಾಗಮಂಡದಲ್ಲಿ ಧಾರಕಾರವಾಗಿ ಮಳೆಯಾಗುತ್ತಿರುವ ಪರಿಣಾಮದಿಂದ ತ್ರಿವೇಣಿ ಸಂಗಮದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ತ್ರಿವೇಣಿ ಸಂಗಮದ ಉದ್ಯಾನ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ಅಲ್ಲದೇ ಕ್ಷಣಕ್ಕೂ ಕ್ಷಣಕ್ಕೂ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನಾಪೋಕ್ಲು- ಅಯ್ಯಂಗೇರಿ – ಸಣ್ಣಪುಲಿಕೋಟ್ಟು ರಸ್ತೆ ಸಂಪರ್ಕ ಕಡತಗೊಳ್ಳುವ ಭೀತಿ ಎದುರಾಗಿದೆ. ಆದ್ರೆ ಈ ಬಾರಿ ಮೇಲುಸೇತುವೆ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾವೇರಿ ಭಕ್ತರು ಹಾಗೂ ಭಾಗಮಂಡಲದ ಗ್ರಾಮೀಣ ಭಾಗದ ಜನರು ಸೇತುವೆ ಮೇಲೆ ಸಂಚಾರ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರೆದಿದ್ದು, ಇನ್ನೂ ಎರಡು ಮೂರು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : ರೇಪಿಸ್ಟ್ ಮಡೆನೂರು ಮನು ಮೇಲೆ ಬ್ಯಾನ್ ಹೇರಿದ ಸ್ಯಾಂಡಲ್ವುಡ್ – 100ಕ್ಕೂ ಹೆಚ್ಚು ಕೇಸ್ ದಾಖಲು!







